ವಿಮೆ ಕಂಪನಿಗಳಲ್ಲಿ ನಗದುರಹಿತ ವೈದ್ಯಕೀಯ ಸೇವೆ ಪಡೆಯುವುದು ಪಾಲಿಸಿದಾರಸ್ನೇಹಿ ವ್ಯವಸ್ಥೆಯಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಹಣ ಸಂಗ್ರಹಿಸಲು ಓಡಾಡುವುದನ್ನು ತಪ್ಪಿಸಿ, ಕಾರ್ಡ್ ಮೂಲಕ ಸೇವೆ ಪಡೆಯುವುದು ನಮ್ಮನ್ನು ನಿರಾಳರನ್ನಾಗಿಸುತ್ತದೆ. ಈ ನಗದುರಹಿತ ಸೇವೆಯ ಮೂಲಕ ವಿಮೆ ಕಂಪನಿಗಳು ಆಸ್ಪತ್ರೆಗಳ ಹಣಕಾಸಿನ ವೆಚ್ಚವನ್ನು ಸುಲಭವಾಗಿ ನಿಭಾಯಿಸಬಲ್ಲವು. ಆದರೆ, ಕೆಲವು ಸಮಯದ ಬಳಿಕ ಇದು ಅನಿರೀಕ್ಷಿತ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇಂತಹ ಸಮಸ್ಯೆಗಳಿಂದ ಹೊರಬರುವುದು ಹೇಗೆ ನೋಡೋಣ.
ಪೂರ್ಣ ಪ್ರಮಾಣದ ವೆಚ್ಚದ ಬಗ್ಗೆ ಇರಲಿ ಗಮನ: ನಗದುರಹಿತ ಈ ವಿಮಾ ಪಾಲಿಸಿಗಳ ಪ್ರಮುಖ ಸಮಸ್ಯೆ ಎಂದರೆ ಇವು ಪೂರ್ಣ ಪ್ರಮಾಣದ ಸೆಟಲ್ಮೆಂಟ್ಗಳನ್ನು ಮಾಡುವುದಿಲ್ಲ. ವಿಮೆ ಕಂಪನಿಗಳು ಕೆಲವು ನಿರ್ದಿಷ್ಟ ಮೊತ್ತದ ವೈದ್ಯಕೀಯ ವೆಚ್ಚಗಳನ್ನು ಮಾತ್ರ ಭರಿಸುತ್ತವೆ. ಈ ವೇಳೆ ಹೆಚ್ಚುವರಿ ಚಿಕಿತ್ಸೆಗೆ ಪಾಲಿಸಿದಾರರು ಉಳಿದ ಹಣವನ್ನು ಭರಿಸಿ, ಬಳಿಕ ಅದನ್ನು ಕ್ಲೈಮ್ ಮಾಡಿಕೊಳ್ಳಬೇಕು. ಉದಾಹರಣೆಗೆ, ವೈದ್ಯಕೀಯ ಚಿಕಿತ್ಸೆಗೆ ವಿಮಾ ಕಂಪನಿ 30 ಸಾವಿರ ರೂ ಖರ್ಚು ಮಾಡುತ್ತದೆ. ಆದರೆ, ಆಸ್ಪತ್ರೆಗೆ ದಾಖಲಾದ ಬಳಿಕ ವಿಮೆದಾರರು ಹೆಚ್ಚುವರಿ ಚಿಕಿತ್ಸೆ 10 ಸಾವಿರ ಹಣವನ್ನು ನೀಡಬೇಕು. ಈ ಹಣವನ್ನು ಮೊದಲು ವಿಮೆದಾರರು ನೀಡಿದ ಬಳಿಕ ವಿಮಾ ಕಂಪನಿಯಿಂದ ಕ್ಲೈಮ್ ಮಾಡಬಹುದಾಗಿದೆ.
ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಮಾತ್ರ ಸೇವೆ: ವಿಮೆ ಹಣ ಬಳಕೆ ಮಾಡುವ ಮುನ್ನ ವಹಿಸಬೇಕಾದ ಮತ್ತೊಂದು ಮುನ್ನೆಚ್ಚರಿಕೆ ಎಂದರೆ, ವೈದ್ಯಕೀಯ ಸೇವೆ ಪಡೆಯಲು ಹೋಗುವ ಆಸ್ಪತ್ರೆಗಳು ವಿಮಾ ಕಂಪನಿಗಳ ಅಡಿಯಲ್ಲಿನ ನೆಟ್ವರ್ಕ್ ಆಸ್ಪತ್ತೆಗೆ ಸೇರಬೇಕು. ತುರ್ತು ಸಂದರ್ಭದಲ್ಲಿ ಪಾಲಿಸಿದಾರರು ನಾನ್- ನೆಟ್ವರ್ಕ್ ಆಸ್ಪತ್ರೆಗೆ ದಾಖಲಾದರೆ, ವಿಮಾ ಕಂಪನಿಗಳು ನಗದುರಹಿತ ಸೇವೆ ಪಡೆಯಲು ಅವಕಾಶ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಪಾಲಿಸಿದಾರರು ಚಿಕಿತ್ಸೆಗೆ ತಮ್ಮ ಹಣ ವ್ಯಯ ಮಾಡಬೇಕು. ಬಳಿಕ ಚಿಕಿತ್ಸೆಯ ದಾಖಲೆಗಳು ಮತ್ತು ಬಿಲ್ಗಳ ಮೂಲಕ ಕಂಪನಿಗೆ ಸಲ್ಲಿಸುವ ಬಳಿಕ ಹಣ ಪಡೆಯಬಹುದು. ಈ ಹಿನ್ನೆಲೆಯಲ್ಲಿ ಪಾಲಿಸಿ ಮಾಡಿಸಿದ ಬಳಿಕ ವಿಮೆದಾರರು ಕಂಪನಿಯ ಗ್ರೂಪ್ ಹಾಸ್ಪಿಟಲ್ ಪರಿಶೀಲಿಸುವುದು ಉತ್ತಮ.
ಬಿಲ್ ಪ್ರಕ್ರಿಯೆ ಸುಗಮದ ಬಗ್ಗೆ ಇರಲಿ ಗಮನ: ನಗದುರಹಿತ ಚಿಕಿತ್ಸೆಯ ವೇಳೆ ಪಾಲಿಸಿದಾರರು ಅಗತ್ಯ ದಾಖಲೆಗಳನ್ನು ಕಂಪನಿಗೆ ಸಲ್ಲಿಸುವ ಮೂಲಕ ಭವಿಷ್ಯದಲ್ಲಿ ಬಿಲ್ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ, ವಿಮೆದಾರರು ಥರ್ಡ್ ಪಾರ್ಟಿ ಆಡ್ಮಿನಿಸ್ಟ್ರೇಷನ್ (ಟಿಪಿಎ)ಗೆ ಪೂರ್ವ- ಅಧಿಕಾರ (ಪ್ರಿ- ಅಥರೈಸೆಷನ್) ಅರ್ಜಿಯನ್ನು ತಪ್ಪದೇ ನೀಡಬೇಕು. ಇದರಿಂದ ಟಿಪಿಎ ಹೆಲ್ತ್ ಕಾರ್ಡ್ ಅನ್ನು ಮುಂಗಡವಾಗಿ ದೊರೆಯತ್ತದೆ. ಆಸ್ಪತ್ರೆಗೆ ದಾಖಲಾಗುವಾಗ ಈ ಕಾರ್ಡ್ ನೀಡುವ ಮೂಲಕ ನಗದುರಹಿತ ವೈದ್ಯಕೀಯ ಸೇವೆ ಪಡೆಯಬಹುದಾಗಿದೆ.
ಪಾಲಿಸಿ ಕಂಪನಿ ಆಯ್ಕೆ ಬಗ್ಗೆ ಎಚ್ಚರಿಕೆ: ವೈದ್ಯಕೀಯ ತುರ್ತು ಸಂದರ್ಭದಲ್ಲಿ ಈ ನಗದುರಹಿತ ಸೇವೆ ಪ್ರಕ್ರಿಯೆ ಸವಾಲಾಗುತ್ತದೆ. ಕೆಲವು ಶಸ್ತ್ರಚಿಕಿತ್ಸೆಗಳನ್ನು ತುರ್ತಾಗಿ ಮಾಡಬೇಕಾಗುತ್ತದೆ. ಈ ವೇಳೆ ವಿಳಂಬವಾಗದಂತೆ ತಕ್ಷಣಕ್ಕೆ ಹಣ ಕಟ್ಟುವಂತೆ ವೈದ್ಯರು ಸೂಚಿಸುತ್ತಾರೆ. ಈ ಸಂದರ್ಭದಲ್ಲಿ ಪಾಲಿಸಿದಾರರು ಹಣವನ್ನು ಕಟ್ಟಿ ಬಳಿಕ ಈ ಹಣವನ್ನು ವಿಮಾ ಕಂಪನಿಯಲ್ಲಿ ಕ್ಲೈಮ್ ಮಾಡಬಹುದಾಗಿದೆ. ಈ ರೀತಿ ಪ್ರಕ್ರಿಯೆನಡೆಯುವ ಹಿನ್ನೆಲೆಯಲ್ಲಿ ಪಾಲಿಸಿದಾರರು ಆನ್ಲೈನ್ಗಳಲ್ಲೇ ಬಿಲ್ಗಳನ್ನು ನಿರ್ವಹಿಸುವಂತಹ ಸ್ಟ್ರಾಂಗ್ ನೆಟ್ವರ್ಕ್ ಹೊಂದಿರುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಎಲ್ಲಾ ಸೇವೆಗಳು ಸಿಗುವುದಿಲ್ಲ: ಕೆಲವು ಚಿಕಿತ್ಸೆಗಳು ಕೂಡ ನಗದುರಹಿತ ಸೇವೆಯಲ್ಲಿ ಸಿಗುವುದಿಲ್ಲ. ಕಾರಣ ಕಂಪನಿಯ ವಿವಿಧ ನಿಯಮಗಳಿಂದ. ಸಾಮಾನ್ಯವಾಗಿ ಆಸ್ಪತ್ರೆಯ ಆಡ್ಮಿಷನ್ ಚಾರ್ಚ್, ಸಾಮಾನ್ಯ ತಪಾಸಣೆ ಹಾಗೂ ವಿಶೇಷ ವಿದ್ಯಕೀಯ ಪರೀಕ್ಷೆಗಳಿಗೆ ನಗದುರಹಿತ ಸೇವೆ ಕ್ಲೈಮ್ ಮಾಡಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಸಿದಾರರು ಈ ರೀತಿಯ ಸೇವೆ ನೀಡುವ ಕಂಪನಿಗಳನ್ನು ನೋಡಿ ವಿಮೆ ಮಾಡಿಸುವುದು ಉತ್ತಮ ಮಾರ್ಗವಾಗಿದೆ.
ಯಾರದೇ ತಪ್ಪಿನಿಂದ ನಷ್ಟ ಪಾಲಿಸಿದಾರರಿಗೆ: ಇನ್ನು ವಿಮೆ ಕಂಪನಿಗಳು, ಟಿಪಿಎ ಅಥವಾ ವಿಮೆ ದಾರರು ಮಾಡುವ ತಪ್ಪುಗಳಿಂದಲೂ ವಿಮೆದಾರರೇ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಈ ಹಿನ್ನೆಲೆಯಲ್ಲಿ ಪಾಲಿಸಿ ಮಾಡಿಸುವ ವೇಳೆ ಸಂಪೂರ್ಣ ನಿಯಮಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡುವುದು ಉತ್ತಮ. ಯಾವೆಲ್ಲ ವೈದ್ಯಕೀಯ ಸೇವೆ ಪಡೆಯಬಹುದು ಎಂಬುದನ್ನು ಗಮನಿಸಬೇಕು. ಕ್ಲೈಮ್ ಪ್ರಕ್ರಿಯೆಯಲ್ಲಿ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಗಮನಿಸುವುದು ಕೂಡ ಪ್ರಮುಖವಾಗಿದೆ.
ಇದನ್ನೂ ಓದಿ: ಡಿಜಿಟಲ್ ಪೇಮೆಂಟ್ ಸಿಸ್ಟಂ ಆರಂಭಿಸಿದ ಟ್ವಿಟರ್: ಜಾಹೀರಾತುದಾರರನ್ನು ಉಳಿಸಿಕೊಳ್ಳಲು ಮಸ್ಕ್ ಕಸರತ್ತು