ಮುಂಬೈ: ವಾರಾಂತ್ಯ ಶನಿವಾರ ಮತ್ತು ಭಾನುವಾರ ಬಾಗಿಲು ಬಂದ್ ಆಗಬೇಕಿದ್ದ ಮುಂಬೈ ಷೇರುಪೇಟೆ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ವಹಿವಾಟು ನಡೆಸಿದ್ದು, ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಪ್ರಭಾವದಿಂದ ಸೆನ್ಸೆಕ್ಸ್ನ ಜಂಗಾಬಲವೇ ಕುಸಿದಿದೆ.
ಬೆಳಗಿನ ವಹಿವಾಟಿನಲ್ಲಿ 279 ಅಂಕ ಕಳೆದುಕೊಂಡಿದ್ದ ಸೆನ್ಸೆಕ್ಸ್ ನಂತರದ ಅವಧಿಯಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಟೆಕ್ ಮಹೀಂದ್ರಾ, ಇನ್ಫೋಸಿಸ್ ಹೊರತುಪಡಿಸಿ ಎಲ್ಲ ಷೇರುಗಳ ಮೌಲ್ಯ ಕುಸಿತಕಂಡವು.
ದಿನದ ಅಂತ್ಯದ ವೇಳೆಗೆ ಸೆನ್ಸೆಕ್ಸ್ 1,048 ಅಂಶಗಳ ಇಳಿಕೆಯೊಂದಿಗೆ 39,675 ಅಂಶಗಳ ಮಟ್ಟದಲ್ಲೂ ಹಾಗೂ ನಿಫ್ಟಿ 301 ಅಂಶಗಳ ಕುಸಿತದೊಂದಿಗೆ 11,660 ಅಂಶಗಳ ಮಟ್ಟದಲ್ಲಿ ಮಾಹಾ ಕುಸಿತ ಕಂಡಿತು. ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 28 ಪೈಸೆಗಳಷ್ಟು ಕುಸಿದು ₹ 71.46ರಲ್ಲಿ ವಹಿವಾಟು ನಡೆಸಿತು.
ಬಜೆಟ್ನಲ್ಲಿ ವಿತ್ತೀಯ ಕೊರತೆಯ ಗುರಿಯಲ್ಲಿ ಇರಿಸಲಾಗಿದ್ದ ಮಿತಿಯನ್ನು ಹೆಚ್ಚಿಸುವ ಸೂಚನೆ ಸಿಕ್ಕಿದ್ದರೂ ಷೇರುಪೇಟೆಯಲ್ಲಿ ಹೂಡಿಕೆಯ ಉತ್ಸಾಹ ಕಳೆಗುಂದಿತ್ತು. ಹಣಕಾಸಿನ ಅಭದ್ರತೆಯ ಭಯದಲ್ಲಿ ಕೆಲ ಹೂಡಿಕೆದಾರರು ತಮ್ಮ ಬಂಡವಾಳ ವಾಪಸ್ ಪಡೆದುಕೊಂಡಿದ್ದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನಾದ ಕೊರೊನಾ ವೈರಸ್ ನಿರೀಕ್ಷಿಸಿದ್ದಕ್ಕಿಂತಲೂ ಅಪಾಯಕಾರಿಯಾಗಿ ಪರಿಣಮಿಸುವ ಸೂಚನೆ ಸಿಕ್ಕಿದ್ದು, ಇದರಿಂದ ವಿಶ್ವದಾದ್ಯಂತ ಆರ್ಥಿಕತೆಗೆ ಧಕ್ಕೆಯಾಗಬಹುದು ಎಂಬ ಶಂಕೆ ಸಹ ಕಂಡುಬರುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮುಂಬೈ ಪೇಟೆ ಮಹಾಪತನ ಕಂಡಿದೆ.