ಮುಂಬೈ: ದೇಶಿ ಹಾಗೂ ಜಾಗತಿಕ ಆರ್ಥಿಕ ಸಮರಕ್ಕೆ ಸಿಲುಕಿದ್ದ ಮುಂಬೈ ಷೇರುಪೇಟೆಯು ಈ ಹಿಂದಿನ ಒಂಬತ್ತು ವಹಿವಾಟಿನಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣದೇ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 1,940.73 ಮತ್ತು 600 ಅಂಶಗಳ ಕುಸಿತ ದಾಖಲಿಸಿತ್ತು. ಇಂದು ಈ ಅನಿಶ್ಚಿತತೆಯಿಂದ ಮೇಲೆದ್ದ ಪೇಟೆಯು ಋಣಾತ್ಮಕ ಹಾದಿಗೆ ಮರಳಿದೆ.
ಅಮೆರಿಕ- ಚೀನಾ ನಡುವಿನ ವಾಣಿಜ್ಯ ಸಮರ, ದೇಶಿ ಹಾಗೂ ಜಾಗತಿಕ ಬೃಹತ್ ಆರ್ಥಿಕತೆಯಲ್ಲಿನ ಅಸ್ಥಿರತೆ, ಲೋಕಸಭಾ ಚುನಾವಣೆಯ ಮತದಾನ ಸೇರಿದಂತೆ ಇತರ ನಡೆಗಳನ್ನು ಅನುಸರಿಸಿದ ಮುಂಬೈ ಪೇಟೆ ಸತತ ಒಂಬತ್ತು ದಿನಗಳೂ ಕುಸಿತ ಕಂಡು ಹೂಡಿಕೆದಾರರ ಕೋಟ್ಯಂತರ ರೂ. ಸಂಪತ್ತು ಕರಗಿತ್ತು. ಮುಂದಿನ ದಿನಗಳಲ್ಲಿ ಕೇಂದ್ರೀಯ ಬ್ಯಾಂಕ್ ತನ್ನ ವಿತ್ತೀಯ ನೀತಿಗಳಲ್ಲಿ ಬದಲಾವಣೆ ತರಲಿದೆ ಎಂಬ ಸುಳಿವು ಪೇಟೆಯ ಜಿಗಿತಕ್ಕೆ ಕಾರಣವಾಗಿದೆ. ಜೊತೆಗೆ ಬ್ಯಾಂಕಿಂಗ್, ಫಾರ್ಮಾ ಹಾಗೂ ಗ್ರಾಹಕ ಬಳಕೆಯ ಸರಕುಗಳು ಇದಕ್ಕೆ ಇಂಬು ನೀಡಿವೆ ಎಂದು ಹೂಡಿಕೆ ತಜ್ಞರು ಅಂದಾಜಿಸಿದ್ದಾರೆ.
ಮಂಗಳವಾರದ ಪೇಟೆಯಲ್ಲಿ ಮುಂಬೈ ಸೂಚ್ಯಂಕ ಸೆನ್ಸೆಕ್ಸ್ 227.71 ಅಂಶಗಳ ಏರಿಕೆಯೊಂದಿಗೆ 37,318.53 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 73.85 ಅಂಶಗಳ ಜಿಗಿತದೊಂದಿಗೆ 11,222.05 ಅಂಕಗಳ ಏರಿಕೆಯಲ್ಲಿ ಅಂತ್ಯಗೊಳಿಸಿತು. ಪೇಟೆಯಲ್ಲಿ 1,138 ಕಂಪನಿಯ ಷೇರುಗಳ ಮೌಲ್ಯದಲ್ಲಿ ಏರಿಕೆ ದಾಖಲಿಸಿದ್ದರೇ 1,235 ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡಿದೆ.
ಡಾಲರ್ ಎದುರು ರೂಪಾಯಿ ಇಂದಿನ ವಹಿವಾಟಿನಲ್ಲಿ 8 ಪೈಸೆಯ ಅಲ್ಪ ಏರಿಕೆ ದಾಖಲಿಸಿ ₹ 69.86 ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಶೇ 0.24ರಷ್ಟು ಬೆಲೆ ಹೆಚ್ಚಳವಾಗಿದ್ದು, 70.40 ಡಾಲರ್ನಲ್ಲಿ ವಹಿವಾಟು ನಿರತವಾಗಿದೆ.
ಇಂದಿನ ವಹಿವಾಟಿನಲ್ಲಿನ ಸನ್ ಫಾರ್ಮಾ, ಭಾರ್ತಿ ಏರ್ಟೆಲ್, ವೇದಾಂತ, ಇಂಡಸ್ ಬ್ಯಾಂಕ್, ಎಸ್ಬಿಐಎನ್, ಟಾಟಾ ಮೋಟಾರ್ಸ್, ಎಲ್ಟಿ, ಐಸಿಐಸಿಐ ಬ್ಯಾಂಕ್, ಐಟಿಸಿ, ರಿಲಯನ್ಸ್ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡಿತು. ಒಎನ್ಜಿಸಿ, ಪವರ್ ಗ್ರಿಡ್, ಎಂ&ಎಂ, ಹೀರೋ ಮೋಟಾರ್ಸ್, ಟಾಟಾ ಸ್ಟೀಲ್, ಏಷ್ಯಾನ್ ಪೆಯಿಂಟ್ಸ್, ಇನ್ಫೋಸಿಸ್ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.