ನವದೆಹಲಿ: ಜಾಗತಿಕ ಮೊಬೈಲ್ ಮಾರುಕಟ್ಟೆಯ ದೈತ್ಯ ಕಂಪನಿಯಾದ 'ಆ್ಯಪಲ್'ನ ಐಫೋನ್ಗಳ ದರವು ಭಾರತೀಯ ದೇಶಿ ಮಾರುಕಟ್ಟೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಇತ್ತೀಚಿನ ವರದಿ ತಿಳಿಸಿವೆ.
ಭಾರತದಲ್ಲಿ ತಯಾರಿಸಿ (ಮೇಡ್ ಇನ್ ಇಂಡಿಯಾ) ಅಭಿಯಾನದ ಭಾಗವಾಗಿ ಫಾಕ್ಸ್ಕಾನ್ ತನ್ನ ಸ್ಥಳೀಯ ಘಟಕವಾದ ಐಫೋನ್ನ ಬಿಡಿ ಭಾಗಗಳನ್ನು ಜೋಡಿಸುವ ಯೂನಿಟ್‌ನ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಹೀಗಾಗಿ ವಿಶ್ವದ 2ನೇ ಅತಿದೊಡ್ಡ ಸ್ಮಾರ್ಟ್ಫೋನ್ ಗ್ರಾಹಕ ಮಾರುಕಟ್ಟೆಯಾದ ಭಾರತದಲ್ಲಿ ಆ್ಯಪಲ್ ಮೊಬೈಲ್ಗಳ ಬೆಲೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಇದರ ಕಾರ್ಯಾರಂಭಕ್ಕೆ ಕೆಲವು ಅನುಮೋದನೆಗಳಷ್ಟೇ ಬಾಕಿ ಇದ್ದು, ಭಾರತದಲ್ಲಿ ನಿರ್ಮಿತ ಐಫೋನ್ 'ಎಕ್ಸ್ಆರ್' ಮತ್ತು 'ಎಕ್ಸ್ಎಸ್' ಶ್ರೇಣಿಗಳು ಅಗಸ್ಟ್ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಆ್ಯಪಲ್ ಕಂಪನಿಯ ಸ್ಮಾರ್ಟ್ಫೋನ್ನ ಬಿಡಿ ಭಾಗಗಳು ಸ್ಥಳೀಯವಾಗಿ ಜೋಡೆಣೆ ಆಗುವುದರಿಂದ ಸಿದ್ಧ ಉತ್ಪನ್ನಗಳ ಆಮದು ಮೇಲಿನ ಸುಂಕ ವಿನಾಯಿತಿ ದೊರೆಯಲಿದೆ. ಹೆಚ್ಚುವರಿ ತೆರಿಗೆಯ ಹೊರೆ ಕೂಡ ತಪ್ಪಲಿದೆ. ಜೊತೆಗೆ ಭಾರತದಲ್ಲಿ ತನ್ನದೇ ಆದ ಚಿಲ್ಲರೆ ಮಳಿಗೆ ತೆರೆಯಲು ಸ್ಥಳೀಯ ಮಾನದಂಡಗಳು ಅನುಕೂಲವಾಗಲಿವೆ. ಹೀಗಾಗಿ, ದುಬಾರಿ ಬೆಲೆಯ ಐಫೋನ್‌ಗಳು ವಿದೇಶಿ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.