ನವದೆಹಲಿ: ಮುಂದಿನ ವಾರ ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳನ್ನು ತೆರೆಯುವುದಾಗಿ ಆ್ಯಪಲ್ ಕಂಪನಿ ಘೋಷಿಸಿದೆ. ಇದೇ ಮೊದಲ ಬಾರಿಗೆ ದೇಶದ ಎಲ್ಲಾ ಭಾಗಗಳಿಗೆ ಆ್ಯಪಲ್ ಉತ್ಪನ್ನಗಳು ಸಿಗುವಂತೆ ಮಾಡಲು ಕಂಪನಿ ಮುಂದಾಗಿದೆ. ಹಬ್ಬಗಳ ಸೀಸನ್‌ನಲ್ಲಿ ಇದು ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಸೆಪ್ಟೆಂಬರ್ 23 ರಂದು ಆನ್‌ಲೈನ್ ಸ್ಟೋರ್‌ಗಳನ್ನು ತೆರೆಯಲಿದ್ದು, ವಿಶ್ವದಾದ್ಯಂತ ಇರುವ ಆ್ಯಪಲ್ ಕಂಪನಿಗಳಲ್ಲಿ ಸಿಗುವಂತಹ ಉತ್ತಮ ಅನುಭವ ಇಲ್ಲೂ ಸಿಗಲಿದೆ. ಆನ್‌ಲೈನ್ ಟೀಂನ ಸದಸ್ಯರು ಕಂಪನಿಯ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಆ್ಯಪಲ್ ಕಂಪನಿ ಸಿಇಒ ಟೀಮ್ ಕುಕ್, ಇದೇ ವರ್ಷ ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳನ್ನು ತೆರೆಯವುದಾಗಿ ಕಳೆದ ಫೆಬ್ರವರಿಯಲ್ಲಿ ಹೇಳಿದ್ದರು. 2021ಕ್ಕೆ ಮೊದಲ ಫಿಸಿಕಲ್ ರಿಟೇಲ್ ಸ್ಟೋರ್ ಆರಂಭಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.
ನಮ್ಮ ಬಳಕೆದಾರರ ಬಗ್ಗೆ ತಿಳಿದಿದೆ. ಗ್ರಾಹಕರು ನಮ್ಮೊಂದಿಗೆ ಇರಲಿದ್ದು, ಆನ್‌ಲೈನ್ ಸ್ಟೋರ್‌ಗಳಲ್ಲಿ ಆ್ಯಪಲ್ ಉತ್ಪನ್ನಗಳನ್ನು ಖರೀದಿಸಲಿದ್ದಾರೆ. ಅತಿ ಮುಖ್ಯವಾದ ಈ ಸಂದರ್ಭದಲ್ಲಿ ಉತ್ತಮ ಆಫರ್‌ಗಳನ್ನು ನೀಡಲಿದ್ದೇವೆ ಎಂದು ಆ್ಯಪಲ್ ಸಂಸ್ಥೆಯ ರಿಟೇಲ್ ವಿಭಾಗದ ಹಿರಿಯ ಉಪಾಧ್ಯಕ್ಷ ಒಬ್ರಿಯೆನ್ ತಿಳಿಸಿದ್ದಾರೆ.
ಆ್ಯಪಲ್ ಕಂಪನಿ ಪ್ರಸ್ತುತ ಭಾರತದಲ್ಲಿ ಥರ್ಡ್ ಪಾರ್ಟಿ ಹಾಗೂ ಆನ್‌ಲೈನ್ ಮಾರುಕಟ್ಟೆಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯಲು ಸಿಂಗಲ್ ಬ್ಯಾಂಡ್ ರಿಟೇಲ್‌ಗೆ ಅನುಕೂಲವಾಗುವ ಸಲುವಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಗೆ ಮಾರ್ಗದರ್ಶನಗಳನ್ನು ಪರಿಷ್ಕರಣೆ ಮಾಡಿತ್ತು.