ನವದೆಹಲಿ: ದೇಶದ ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿದೆ. ಪ್ರಸ್ತುತ ಬೆಳವಣಿಗೆಯ ದರದಲ್ಲಿ 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಗುರಿ ತಲುಪುವ ಪ್ರಶ್ನೆಯೇ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಸಿ. ರಂಗರಾಜನ್ ಭವಿಷ್ಯ ನುಡಿದಿದ್ದಾರೆ.
2025ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇರಿಸಿಕೊಂಡಿದೆ. ಪ್ರಸ್ತುತ ಆರ್ಥಿಕತೆಯ ಮೇಲೆ ಕಪ್ಪು ಮೋಡಗಳು ಆವರಿಸಿರುವುದರಿಂದ ಅನೇಕ ಆರ್ಥಿಕ ತಜ್ಞರು, ವಿಶ್ಲೇಷಕರು, ಚಿಂತಕರು ನಿಗದಿತ ಗುರಿ ತಲುಪುವುದು ಕಷ್ಟವೆಂದು ವ್ಯಾಖ್ಯಾನಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಬೆಳವಣಿಗೆಯು 6 ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಇಳಿಕೆಯಾಗಿದೆ. 2ನೇ ತ್ರೈಮಾಸಿಕದ ಉತ್ತಮ ಮುನ್ಸೂಚನೆ ಹೊರತಾಗಿಯೂ ಈಗ ಶೇ 4.3ರಷ್ಟಿದೆ. ಆರ್‌ಬಿಐ ಸಹ ತನ್ನ ಬೆಳವಣಿಗೆ ಅಂದಾಜನ್ನು ಎರಡು ತಿಂಗಳಲ್ಲಿ 90 ಬಿಪಿಎಸ್‌ಯಿಂದ ಅಕ್ಟೋಬರ್ ನೀತಿ ಪರಿಶೀಲನೆಯಲ್ಲಿ ಶೇ 6.1ಕ್ಕೆ ಇಳಿಸಿದೆ.
ಪ್ರಸ್ತುತ ಆರ್ಥಿಕತೆಯು ಸುಮಾರು 2.7 ಟ್ರಿಲಿಯನ್ ಡಾಲರ್ನಷ್ಟಿದೆ. ಮುಂದಿನ 5 ವರ್ಷಗಳಲ್ಲಿ ಇದನ್ನು ದ್ವಿಗುಣಗೊಳಿಸುವ ಅಂದರೆ 5 ಟ್ರಿಲಿಯನ್ ಡಾಲರ್ ಬಗ್ಗೆ ಮಾತನಾಡುತ್ತಿದ್ದೇವೆ. ಆ ಮಟ್ಟವನ್ನು ಸಾಧಿಸಲು ಅಗತ್ಯವಾದ ಬೆಳವಣಿಗೆಯ ದರವು ವಾರ್ಷಿಕ ಶೇ 9ಕ್ಕಿಂತ ಹೆಚ್ಚಿರಬೇಕು. ಹೀಗಾಗಿ, 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ಪ್ರಶ್ನೆಯೇ ಇಲ್ಲ ಎಂದು ರಂಗರಾಜನ್ ಹೇಳಿದರು.
ನೀವು ಈಗಾಗಲೇ ಎರಡು ವರ್ಷಗಳು ಕಳೆದುಕೊಂಡಿದ್ದೀರಿ. ಈ ವರ್ಷ ಇದು ಶೇ 6ಕ್ಕಿಂತ ಕಡಿಮೆ ಬೆಳವಣಿಗೆಯಾಗಲಿದೆ. ಮುಂದಿನ ವರ್ಷ ಇದು ಶೇ 7 ರಷ್ಟಿರಬಹುದು. ನಂತರ ಆರ್ಥಿಕತೆ ಮೇಲೇಳಬಹುದು ಎಂದು ಐಬಿಎಸ್-ಐಸಿಎಫ್‌ಐ ಬಿಸಿನೆಸ್ ಸ್ಕೂಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೇಳಿದರು.
ಅಭಿವೃದ್ಧಿ ಹೊಂದಿದ ದೇಶವಾಗಲು ಜನರ ತಲಾ ಆದಾಯವು 12,000 ಡಾಲರ್ನಷ್ಟು ಇರಬೇಕು. ನಾವು ಆ ಮಟ್ಟ ತಲುಪಲು ಇನ್ನೂ 22 ವರ್ಷಗಳು ತೆಗೆದುಕೊಳ್ಳುತ್ತದೆ. ಇದನ್ನು ಸಾಧಿಸಲು ವಾರ್ಷಿಕ ಶೇ 9ರಷ್ಟು ಬೆಳೆವಣಿಗೆಯ ಅಗತ್ಯವಿದೆ ಎಂದರು.