ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಥಗಿತಗೊಂಡಿದ್ದ ವ್ಯಾಪಾರ ಸಂಬಂಧ, ಕ್ರಮೇಣ ಪುನಃಸ್ಥಾಪನೆಯ ಹಾದಿಯಲ್ಲಿ ಸಾಗುತ್ತಿರುವಂತೆ ತೋರುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಶಾಂತಿ ಕಾಪಾಡಲು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಘೋಷಿಸಿದ ನಂತರ, ಪಾಕಿಸ್ತಾನ ಸರ್ಕಾರವು ಮುಂದಿನ ದಿನಗಳಲ್ಲಿ ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳಲು ಅವಕಾಶ ನೀಡಬಹುದು.
ಎಲ್‌ಒಸಿ ಮೇಲಿನ 2003ರ ಕದನ ವಿರಾಮ ಒಪ್ಪಂದದ ಪ್ರಗತಿಯು ವಾಣಿಜ್ಯ ಸಚಿವಾಲಯಕ್ಕೆ ಈ ನಿರ್ಧಾರ ಮರುಪರಿಶೀಲಿಸಲು ಅವಕಾಶ ನೀಡಿದೆ. ಮತ್ತೊಂದೆಡೆ ಪಾಕಿಸ್ತಾನ ಸರ್ಕಾರದ ಮೂಲಗಳು ಹಂಚಿಕೊಂಡ ವಿವರಗಳ ಪ್ರಕಾರ, ಇಸ್ಲಾಮಾಬಾದ್ ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳಬಹುದು.
ಮುಂದಿನ ವಾರ ಭಾರತದಿಂದ ಹತ್ತಿ ಮತ್ತು ನೂಲು ಆಮದು ಮಾಡಿಕೊಳ್ಳಬೇಕೆ ಎಂಬ ಬಗ್ಗೆ ಸಲಹೆಗಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಫೆಡರಲ್ ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ದೃಢಪಡಿಸಿದರು.
ಪ್ರಮುಖ ನಿರ್ಧಾರ ತೆಗೆದುಕೊಂಡ ನಂತರ, ಔಪಚಾರಿಕ ಸಾರಾಂಶ ಪಟ್ಟಿ ಆರ್ಥಿಕ ಸಮಿತಿಯ ಮುಂದೆ ಮಂಡಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಭಾರತದಿಂದ ಮೊದಲ ಹಂತದಲ್ಲಿ ಹತ್ತಿ ಮತ್ತು ನೂಲು ಆಮದಿನ ಪುನಃಸ್ಥಾಪನೆ ಕುರಿತು ಚರ್ಚೆಗಳು ಈಗಾಗಲೇ ನಡೆಯುತ್ತಿವೆ ಎಂದು ಮೂಲಗಳು ಖಚಿತಪಡಿಸಿವೆ. ಪ್ರಧಾನಿ ಇಮ್ರಾನ್ ಖಾನ್ ಅವರು ಸಾರಾಂಶಕ್ಕೆ ಅನುಮೋದನೆ ನೀಡಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಅವರು ವಾಣಿಜ್ಯ ಖಾತೆಯನ್ನು ಸಹ ಹೊಂದಿದ್ದಾರೆ.
ಇದನ್ನೂ ಓದಿ: ಪುರುಷ ಸಮನಾದ ಕಾನೂನು ಹಕ್ಕು: ಭಾರತಕ್ಕೆ ಸೌದಿ, ಟರ್ಕಿಗಿಂತ ಕಳಪೆ ಶ್ರೇಯಾಂಕ
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಮತ್ತು 35 ಎ ರದ್ದುಪಡಿಸಿದ ಬಳಿಕ ಮೋದಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪಾಕಿಸ್ತಾನವು ಭಾರತದೊಂದಿಗಿನ ವ್ಯಾಪಾರ ಸಂಬಂಧ ಕಡಿದುಕೊಂಡಿತ್ತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಬದಲಾಯಿಸುವ ಯಾವುದೇ ಏಕಪಕ್ಷೀಯ ನಿರ್ಧಾರ ಕಾನೂನುಬಾಹಿರ ಮತ್ತು ಯುಎನ್ ನಿರ್ಣಯವನ್ನು ಉಲ್ಲಂಘಿಸುತ್ತದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.
ಪಾಕಿಸ್ತಾನ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಕನಿಷ್ಠ ಆರು ಮಿಲಿಯನ್ ಬೇಲ್‌ಗಳ ಕೊರತೆಯಿದೆ. ದೇಶವು ಸುಮಾರು 6,88,305 ಮೆಟ್ರಿಕ್ ಟನ್ ಹತ್ತಿ ಮತ್ತು ನೂಲುಗಳನ್ನು ಆಮದು ಮಾಡಿಕೊಳ್ಳಲು 1.1 ಬಿಲಿಯನ್ ಡಾ;ರ್ ವೆಚ್ಚ ಮಾಡಲಿದೆ. ಇನ್ನೂ 3.5 ಮಿಲಿಯನ್ ಬೇಲ್‌ಗಳ ಅಂತರ ಕಾಡಲಿದ್ದು, ಅದನ್ನು ಆಮದಿನ ಮೂಲಕ ಭರ್ತಿ ಮಾಡಬೇಕಾಗಿದೆ.
ಮತ್ತೊಂದೆಡೆ ಆಲ್ ಪಾಕಿಸ್ತಾನ್ ಟೆಕ್ಸ್ಟೈಲ್ ಮಿಲ್ಸ್ ಅಸೋಸಿಯೇಷನ್ (ಎಪಿಟಿಎಂಎ) ಭಾರತದಿಂದ ಹತ್ತಿ ಮತ್ತು ನೂಲು ಆಮದಿಗೆ ಅವಕಾಶ ನೀಡದಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಅನೇಕ ಮಿಲ್ಲರ್‌ಗಳು ಈಗಾಗಲೇ ಹತ್ತಿ ಸಂಗ್ರಹಿಸಿಟ್ಟಿದ್ದಾರೆ. ಈಗ ಹೆಚ್ಚಿನ ದರವನ್ನು ವಿಧಿಸುತ್ತಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.