ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ಆರ್ಥಿಕ ಬೆಳವಣಿಗೆಯು ಸಾಮಾನ್ಯ ಸ್ಥಿತಿಗೆ ಮರಳುವ ವಿಶ್ವಾಸಾರ್ಹ ಚಿಹ್ನೆಗಳನ್ನು ಪ್ರದರ್ಶಿಸಿದೆ. ಜನರ ಸಂಕಷ್ಟ ನಿವಾರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ
ಕೋವಿಡ್-19 ಬಿಕ್ಕಟ್ಟಿನ ಕೊನೆಯ ಆರು ತಿಂಗಳಲ್ಲಿ ಆರ್ಥಿಕತೆಯ ಚೇತರಿಕೆ ಪ್ರಕ್ರಿಯೆ ವೃದ್ಧಿಸಲು ಹಣಕಾಸಿನ ಪ್ರಚೋದನೆ ಮತ್ತು ಪ್ಯಾಕೇಜ್ ನೆರವಾಗಿವೆ. ಎಲ್ಲ ಸ್ಟೇಕ್ಹೋಲ್ಡರ್ ಮತ್ತು ನಾಗರಿಕರ ಕಳವಳಗಳನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಂತಹಂತವಾಗಿ ವಿಸ್ತರಣೆಯಾದ ಆರ್ಥಿಕತೆಯಿಂದಾಗಿ ಮತ್ತೆ ಬೇಡಿಕೆ ಮತ್ತು ಪೂರೈಕೆ ಎರಡೂ ಟ್ರ್ಯಾಕ್ಗೆ ಮರಳಿವೆ ಎಂದಿದೆ.
ಕೊರೊನಾ ವೈರಸ್ ಅವಧಿಯಲ್ಲಿ ಕಳೆದ ಕೆಲವು ತಿಂಗಳಲ್ಲಿನ ಸರ್ಕಾರದ ಶ್ರಮದಾಯಕ ಪ್ರಯತ್ನಗಳು ಈಗ ಹಸಿರು ಚಿಗುರುಗಳಾಗಿ ತೋರಿಸಲಾರಂಭಿಸಿವೆ. ಸೆಪ್ಟೆಂಬರ್ ತಿಂಗಳು ಆರ್ಥಿಕ ಬೆಳವಣಿಗೆಯ ಸಾಮಾನ್ಯ ಸ್ಥಿತಿಗೆ ಮರಳುವ ವಿಶ್ವಾಸಾರ್ಹ ಚಿಹ್ನೆಗಳನ್ನು ಪ್ರದರ್ಶಿಸಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್-19 ಸೋಂಕು ಆರ್ಥಿಕತೆ ಮತ್ತು ಜನರ ಜೀವನೋಪಾಯದ ಮೇಲಿನ ಪರಿಣಾಮನ ತಗ್ಗಿಸಲು, ಸರ್ಕಾರದ ಎಲ್ಲ ಸಾಧ್ಯತೆಗಳು ಮುಕ್ತವಾಗಿವೆ. ಜನರ ದುಃಖ ಸುಧಾರಿಸಲು ಯಾವುದೇ ಉನ್ನತ ಕ್ರಮಗಳನ್ನು ತೆಗೆದುಕೊಳ್ಳಲು ಹಣಕಾಸು ಸಚಿವರು ಹಿಂಜರಿಯುವುದಿಲ್ಲ ಎಂದು ಸಚಿವಾಲಯ ಅಭಯ ನೀಡಿದೆ.
ಲಾಕ್‌ಡೌನ್ ಅನ್ನು ಹಂತ-ಹಂತವಾಗಿ ಸಡಿಲಿಸುವುದರೊಂದಿಗೆ ಆರ್ಥಿಕತೆಯು ಉತ್ತೇಜಕ ವೇಗ ಪಡೆಯುತ್ತಿದೆ. ಏರಿಕೆ ಆಗುತ್ತಿರುವ ವ್ಯಾಪಾರ ಚಟುವಟಿಕೆಗಳು ಆರ್ಥಿಕತೆಯ ಸಕಾರಾತ್ಮಕ ಚೇತರಿಕೆಗೆ ಕಾರಣವಾಗುತ್ತಿವೆ. ಸೆಪ್ಟೆಂಬರ್ ತಿಂಗಳಲ್ಲಿ 95,480 ಕೋಟಿ ರೂ. ಜಿಎಸ್ಟಿ ಸಂಗ್ರಹವು ಶೇ 4ರಷ್ಟು ಏರಿಕೆಯಾಗಿದೆ (ವರ್ಷದಿಂದ ವರ್ಷಕ್ಕೆ).
ರೈಲ್ವೆ ಸರಕು ಆದಾಯವು ಶೇ 13.5ರಷ್ಟು, ವಿದ್ಯುತ್ ಬಳಕೆ ಶೇ 4.2ರಷ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಟ್ರ್ಯಾಕ್ಟರ್ ಮಾರಾಟ, ಆರೋಗ್ಯಕರ ಮಾನ್ಸೂನ್ ಮತ್ತು ಪಿಎಂಐ ಉತ್ಪಾದನೆಯಂತಹ ಇತರ ಬೆಳವಣಿಗೆಯ ಸೂಚಕಗಳು, ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕ, ಇ-ವೇ ಬಿಲ್, ರಫ್ತು, ಖಾರಿಫ್ ಬಿತ್ತನೆ, ಸರಕು ಸಂಚಾರ ಮತ್ತು ಪ್ರಯಾಣಿಕರ ವಾಹನ ಮಾರಾಟ ಇತ್ಯಾದಿಗಳು ವಿಶ್ವಾಸಾರ್ಹ ಮೇಲ್ಮುಖ ಚಲನೆಯನ್ನು ತೋರಿಸುತ್ತಿವೆ.