ಮುಂಬೈ : ಕೇಂದ್ರೀಯ ಬ್ಯಾಂಕ್ನ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಭೆಯು ಅಕ್ಟೋಬರ್ 7-9ರ ನಡುವೆ ನಡೆಯಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿತ್ತೀಯ ನೀತಿಯನ್ನು ಅಕ್ಟೋಬರ್ 9ರಂದು ಪ್ರಕಟಿಸಲಿದೆ.
ಸಮಿತಿಯಲ್ಲಿ ಮೂವರು ಬಾಹ್ಯ ಸದಸ್ಯರ ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿದ ಬಳಿಕ ಸೆಂಟ್ರಲ್ ಬ್ಯಾಂಕ್ ಈ ಘೋಷಣೆ ಹೊರಡಿಸಿದೆ. 2020ರ ಅಕ್ಟೋಬರ್ 7ರಿಂದ ಅ.9ರವರೆಗೆ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಮುಂದಿನ ಸಭೆ ನಿಗದಿಯಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸದಸ್ಯರಾಗಿ ಆಶಿಮಾ ಗೋಯಲ್, ಜಯಂತ್ ಆರ್. ವರ್ಮಾ ಮತ್ತು ಶಶಾಂಕ ಭಿಡೆ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದೆ.
ಅಶಿಮಾ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. ಜಯಂತ್ ವರ್ಮಾ ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಹಣಕಾಸು ಮತ್ತು ಲೆಕ್ಕಪತ್ರ ಪ್ರಾಧ್ಯಾಪಕರಾಗಿದ್ದಾರೆ.
ಶಶಾಂಕ ಭಿಡೆ ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ನ ಹಿರಿಯ ಸಲಹೆಗಾರರಾಗಿದ್ದಾರೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ನಡೆಯಬೇಕಿದ್ದ ಎಂಪಿಸಿ ಸಭೆ, ಖಾಲಿ ಹುದ್ದೆಗಳ ಕಾರಣದಿಂದಾಗಿ ಮುಂದೂಡಿಕೆ ಆಗಿತ್ತು.