ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಸ್ವಾಯತ್ತತೆಯ ಪ್ರತಿಪಾದಕರಾಗಿದ್ದ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ, ತಮ್ಮ ಮೂರು ವರ್ಷಗಳ ಅಧಿಕಾರಾವಧಿ ಮುಗಿಯುವುದಕ್ಕೂ 6 ತಿಂಗಳ ಮೊದಲೇ ದಿಢೀರನೇ ರಾಜೀನಾಮೆ ನೀಡಿ 3 ತಿಂಗಳು ಕಳೆದರೂ ಆ ಹುದ್ದೆ ಖಾಲಿ ಆಗಿಯೇ ಉಳಿದಿದೆ.
ಕಳೆದ ಜುಲೈ 23ರಂದು ವಿರಲ್ ಆಚಾರ್ಯ ಅವರು ಏಕಾಏಕಿ ರಾಜೀನಾಮೆ ಸಲ್ಲಿಸಿ ಆರ್ಬಿಐನಿಂದ ಹೊರಬಂದರು. ಕೇಂದ್ರೀಯ ಬ್ಯಾಂಕ್ನಲ್ಲಿ ಈ ರೀತಿ ಅವಧಿಗೂ ಮೊದಲೇ ಹುದ್ದೆ ತೊರೆದ ಎರಡನೇ ವ್ಯಕ್ತಿ ಇವರಾಗಿದ್ದರು. ಇದಕ್ಕೂ ಮೊದಲು 2018ರ ಡಿಸೆಂಬರ್ನಲ್ಲಿ ಗವರ್ನರ್ ಉರ್ಜಿತ್ ಪಟೇಲ್ ಅವರು ತಮ್ಮ ಅಧಿಕಾರವಧಿ ಪೂರ್ಣಗೊಳ್ಳಲು 9 ತಿಂಗಳು ಬಾಕಿ ಇರುವಂತೆ ರಾಜೀನಾಮೆ ಸಲ್ಲಿಸಿದ್ದರು.
ಆಗಸ್ಟ್ 1ರಂದು ಡೆಪ್ಯುಟಿ ಗವರ್ನರ್ ಹುದ್ದೆಗೆ ಕೇಂದ್ರ ಸರ್ಕಾರ ಅರ್ಹ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಜಾಹೀರಾತಿನ ಪ್ರಕಾರ ಅರ್ಜಿದಾರರು, ಕೇಂದ್ರ ಆಡಳಿತದಲ್ಲಿ ಕಾರ್ಯದರ್ಶಿ ಅಥವಾ ತತ್ಸಮಾನ ಮಟ್ಟ ಒಳಗೊಂಡಂತೆ ಸಾರ್ವಜನಿಕ ಆಡಳಿತದಲ್ಲಿ ಕನಿಷ್ಠ 25 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಭಾರತೀಯ ಅಥವಾ ಅಂತಾರಾಷ್ಟ್ರೀಯ ಸಾರ್ವಜನಿಕ ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ 25 ವರ್ಷಗಳ ಕೆಲಸ ಮಾಡಿರುವವರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಮೂರು ವರ್ಷಗಳಾಗಿದ್ದು, ಮರು ನೇಮಕಾತಿಗೆ ಅರ್ಹರಾಗಿರುತ್ತಾರೆ.
ಅಭ್ಯರ್ಥಿಯ ಆಯ್ಕೆಯ ಜವಾಬ್ದಾರಿಯು ಹಣಕಾಸು ವಲಯದ ನೇಮಕಾತಿ ಶೋಧನಾ ನಿಯಂತ್ರಣ ಸಮಿತಿಯ (ಎಫ್‌ಎಸ್‌ಆರ್‌ಎಎಸ್‌ಸಿ) ಮೇಲಿದ್ದು, ಇದರ ಶಿಫಾರಸು ಆಧರಿಸಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸೆಂಟ್ರಲ್ ಬ್ಯಾಂಕ್ನಲ್ಲಿ ನಾಲ್ವರು ಡೆಪ್ಯುಟಿ ಗವರ್ನರ್‌ಗಳಿರುತ್ತಾರೆ. ಅವರಲ್ಲಿ ಇಬ್ಬರನ್ನು ಹೊರಗಿನಿಂದ ನೇಮಕ ಮಾಡಲಾಗುತ್ತದೆ. ಒಬ್ಬರು ವಾಣಿಜ್ಯ ಬ್ಯಾಂಕರ್ ಮತ್ತು ಇನ್ನೊಬ್ಬರು ಅರ್ಥಶಾಸ್ತ್ರಜ್ಞರಾಗಿರುತ್ತಾರೆ. ಉಳಿದ ಇಬ್ಬರಿಗೆ ಆರ್‌ಬಿಐ ಆಂತರಿಕವಾಗಿ ಬಡ್ತಿ ನೀಡುತ್ತದೆ. ಇದರಲ್ಲಿ ಅರ್ಥಶಾಸ್ತ್ರಜ್ಞರನ್ನು ಆರ್‌ಬಿಐ ಡೆಪ್ಯುಟಿ ಗವರ್ನರ್ ಆಗಿ ನೇಮಕ ಮಾಡಿಕೊಳ್ಳಬೇಕಿದೆ.