ಮುಂಬೈ: 2019-20ರ ಲೆಕ್ಕಪತ್ರ ವರ್ಷಕ್ಕೆ 57,128 ಕೋಟಿ ರೂ. ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಆರ್‌ಬಿಐ ಮಂಡಳಿ ಶುಕ್ರವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯ 584ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಮುಂದುವರಿದ ಜಾಗತಿಕ, ದೇಶೀಯ ಸವಾಲುಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಆರ್‌ಬಿಐ ಕೈಗೊಂಡ ವಿತ್ತೀಯ, ನಿಯಂತ್ರಣ ಮತ್ತು ಇತರ ಕ್ರಮಗಳನ್ನು ಮಂಡಳಿ ಪರಿಶೀಲಿಸಿದೆ.
2019-20ರ ಅಕೌಂಟಿಂಗ್ ವರ್ಷಕ್ಕೆ 57,128 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಮಂಡಳಿಯು ಅನುಮೋದನೆ ನೀಡಿದೆ. ಆಕಸ್ಮಿಕ ಅಪಾಯದ ಕಾಪು ದಾಸ್ತಾನು (ಬಫರ್) ಅನ್ನು ಶೇ 5.5ಕ್ಕೆ ನಿರ್ವಹಿಸಲು ನಿರ್ಧರಿಸಿದೆ ಎಂದು ಆರ್‌ಬಿಐ ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಲಾಭಾಂಶ ಮತ್ತು ಹೆಚ್ಚುವರಿ ಮೀಸಲಿನ 1.76 ಲಕ್ಷ ಕೋಟಿ ಹಣವನ್ನು ವರ್ಗಾವಣೆ ಮಾಡಲು ಮಾಜಿ ಗೌವರ್ನರ್ ಬಿಮಾಲ್ ಜಲಾನ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಮಾಡಿದ ಶಿಫಾರಸ್ಸನ್ನು ಆರ್‌ಬಿಐ ಮಂಡಳಿ ಈ ಹಿಂದೆ ಅನುಮೋದಿಸಿತ್ತು.
2018-19ನೇ ವರ್ಷದ ಹೆಚ್ಚುವರಿ ಹಣವಾದ 1,23,414 ಕೋಟಿ ಮತ್ತು ಇಸಿಎಫ್ನ ಹೆಚ್ಚುವರಿಯ 52,637 ಕೋಟಿ ಹಣವನ್ನು ಸೇರಿಸಿ ಒಟ್ಟು 1,76,051 ಕೋಟಿ ಹಣವನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಿತ್ತು.