ಇಸ್ಲಾಮಾಬಾದ್: ತೀವ್ರ ಸಾಲದ ಸುಳಿಯಿಂದ ಬಚಾವಾಗಲು 600 ಕೋಟಿ ಡಾಲರ್ ಸಾಲ ನೀಡುವಂತೆ ಪಾಕ್ ಸರ್ಕಾರ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಮನವಿ ಮಾಡಿದೆ.
ತನ್ನ ರಾಷ್ಟ್ರದ ಕತ್ತೆಗಳನ್ನು ಮಾರಿಕೊಳ್ಳುವಂಥ ದಯನೀಯ ಪರಿಸ್ಥಿತಿಗೆ ಬಂದು ತಲುಪಿರುವ ಪಾಕ್, 12 ಶತಕೋಟಿ ಡಾಲರ್ ಸಾಲದ ವಿಷವರ್ತುಲಕ್ಕೆ ಸಿಲುಕಿದೆ. ಈ ಆರ್ಥಿಕ ಸಂಕಷ್ಟದಿಂದ ಹೊರಬರಲು ಆ ದೇಶ ಇದೀಗ ವಿಶ್ವ ಹಣಕಾಸು ಸಂಸ್ಥೆಗಳೆದುರು ದುಡ್ಡಿಗಾಗಿ ಅಂಗಲಾಚುತ್ತಿದೆ.
ಐಎಂಎಫ್ ಪಾಕಿಸ್ತಾನಕ್ಕೆ ಸಾಲ ನೀಡಲು ಮುಂದಾಗಿದ್ದು, ಆ ಕುರಿತಂತೆ ಪ್ರಾಥಮಿಕ ಒಪ್ಪಂದ ಏರ್ಪಟ್ಟಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಅವರ ಆರ್ಥಿಕ ಸಲಹೆಗಾರ ಡಾ. ಅಬ್ದುಲ್ ಹಫೀಜ್ ಶೇಖ್ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನವು 1950 ರಲ್ಲಿ ಐಎಂಎಫ್ನ ಸದಸ್ಯತ್ವ ಪಡೆದಿದ್ದು, ಇದುವರೆಗೂ 22 ಒಪ್ಪಂದಗಳನ್ನು ಮಾಡಿಕೊಂಡಿದೆ. ಪ್ರಸ್ತುತ 22ನೇ ಒಪ್ಪಂದವು ಜನಸಾಮಾನ್ಯರ ಮೇಲೆ ಬರೆ ಎಳೆಯಲಿದ್ದು, ಇಂಧನ, ಅನಿಲ ಮತ್ತು ವಿದ್ಯುತ್ ಸೇರಿದಂತೆ ಸರಕು ಹಾಗೂ ಸೇವೆಗಳ ಬೆಲೆ ಏರಿಕೆಯಾಗಲಿದೆ.ಈ ಒಪ್ಪಂದದ ಮೂಲಕ ಹೊಸ ಆರ್ಥಿಕ ಸವಾಲುಗಳಿಗೆ ಪಾಕಿಸ್ತಾನವೇ ತನ್ನನ್ನು ಆಹ್ವಾನಿಸಿದಂತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ರಫ್ತು ಸ್ಪರ್ಧಾತ್ಮಕತೆ ಕುಂಠಿತಗೊಂಡಿದ್ದು, ರಾಷ್ಟ್ರದ ರೂಪಾಯಿ ಮೌಲ್ಯದಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ 2013ರಲ್ಲಿ IMF 6.6 ಶತಕೋಟಿ ಡಾಲರ್ನಷ್ಟು ಸಾಲವನ್ನು ಪಾಕ್‌ಗೆ ನೀಡಿತ್ತು. ಈಗ ಮತ್ತೆ 600 ಕೋಟಿ ಡಾಲರ್ಗೆ ಕೈ ಚಾಚಿದೆ.
ಭಯೋತ್ಪಾದನೆಗೆ ಹಣಕಾಸು ಬಳಕೆ ಮತ್ತು ಮನಿ ಲಾಂಡರಿಂಗ್‌ನಂತಹ ಸಮಸ್ಯೆ ಎದುರಿಸುತ್ತಿರುವ ಪಾಕ್, ಈಗಾಗಲೇ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ನಿಂದ (ಎಫ್ಎಟಿಎಫ್) ಒತ್ತಡಕ್ಕೆ ಒಳಗಾಗುತ್ತಿದೆ. ಜಾಗತಿಕ ಆರ್ಥಿಕತೆಯ ಗ್ರೇ (ಬೂದು) ಪಟ್ಟಿಗೆ ಸೇರಿರುವ ಪಾಕ್, ಕಪ್ಪುಪಟ್ಟಿಗೆ ಬೀಳದಂತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಅಸ್ಥಿರ ಆರ್ಥಿಕತೆಯಿಂದಾಗಿ ಪ್ರಪಾತಕ್ಕೆ ಬೀಳುವಂಥ ದಯನೀಯ ಸ್ಥಿತಿಗೆ ಪಾಕ್ ತಲುಪಿರುವುದು, ದೇಶದ ಅರ್ಥವ್ಯವಸ್ಥೆ ಯಾವ ಮಟ್ಟಿಗೆ ಕುಸಿದಿದೆ ಎನ್ನುವುದನ್ನು ವಿಶ್ವದೆದರು ಪ್ರದರ್ಶಿಸುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.