ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಗಡಿಯ ಬಾಲಾಕೋಟ್ ಮೇಲೆ ಭಾರತದ ವಾಯುಪಡೆ ಏರ್ಸ್ಟ್ರೈಕ್ ದಾಳಿಯ ಬಳಿಕ ವಿಮಾನ ಹಾರಾಟಕ್ಕೆ ನಿಷೇಧ ಹೇರಿದ್ದರಿಂದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಪುಲ್ವಾಮದಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರಿಂದ ಸುಮಾರು 40 ಸೈನಿಕರು ಹುತಾತ್ಮರಾದರು. ಪ್ರತಿಯಾಗಿ ಭಾರತ ಜೈಷ್- ಇ- ಮೊಹಮ್ಮದ್ ಉಗ್ರ ತರಬೇತಿ ಕೇಂದ್ರದ ಮೇಲೆ ಫೆಬ್ರವರಿಯಲ್ಲಿ ಏರ್ಸ್ಟ್ರೈಕ್ ನಡೆಸಿತ್ತು. ಇದರಿಂದ ಉಭಯ ರಾಷ್ಟ್ರಗಳ ನಡುವೆ ಯುದ್ಧ ಕಾರ್ಮೋಡ ಕವಿದು, ಪಾಕ್ ಭಾರತೀಯ ವಿಮಾನಗಳ ಹಾರಟಕ್ಕೆ ತನ್ನ ವಾಯುಗಡಿ ಪ್ರವೇಶದ ನಿರ್ಬಂಧ ಹೇರಿತು.
ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ವಾಯುಯಾನ ಸಂಸ್ಥೆಯಾದ ಏರ್ ಇಂಡಿಯಾ ಜುಲೈ 2ರ ವರೆಗೆ ₹ 495 ಕೋಟಿ ಹಾಗೂ ಇಂಡಿಗೋ ₹ 25.1 ಕೋಟಿಯಷ್ಟು ನಷ್ಟ ಅನುಭವಿಸಿವೆ ಎಂದಿದ್ದಾರೆ.
ವಾಯುಪಡೆ ಪಾಕ್ಗೆ ಹೊಂದಿಕೊಂಡಿರುವ ಬಾಲಾಕೋಟ್ ಭಯೋತ್ಪಾದನ ತರಬೇತಿ ಶಿಬಿರದ ಮೇಲೆ ಫೆಬ್ರವರಿಯಲ್ಲಿ ಏರ್ಸ್ಟ್ರೈಕ್ ನಡೆಸಿತು. ಇದ್ದಾದ ಬಳಿಕ ತನ್ನ ವಾಯುಗಡಿ ಪ್ರವೇಶಕ್ಕೆ ಭಾರತದ ವಾಯುಯಾನ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿತು. ಪರ್ಯಾಯ ಮಾರ್ಗದಲ್ಲಿ ಹಾರಾಟ ನಡೆಸಿದ್ದರಿಂದ ಈ ನಷ್ಟ ಉಂಟಾಗಿದೆ. ಜೂನ್ 20ರ ವರೆಗೆ ಸ್ಪೈಸ್ಜೆಟ್ ಮತ್ತು ಗೋ ಏರ್ ಕ್ರಮವಾಗಿ ₹ 30.70 ಕೋಟಿ ಹಾಗೂ ₹ 2.1 ಕೋಟಿಯಷ್ಟು ನಷ್ಟ ಭರಿಸಬೇಕಾಯಿತು ಎಂದು ವಿವರಿಸಿದರು.