ನವದೆಹಲಿ: ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರು ಭಾರತದ ಬ್ಯಾಂಕಿಂಗ್ ವಲಯದಲ್ಲಿನ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದರು. ಜೊತೆಗೆ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಆಕ್ರಮಣಕಾರಿ ಬದಲಾವಣೆಗಳು ಜಾರಿಗೆ ತರುವಂತೆ ಕರೆ ನೀಡಿದ್ದಾರೆ.
ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಬ್ಯಾಂಕಿಂಗ್ ಕ್ಷೇತ್ರಕ್ಕೆ ತ್ವರಿತವಾಗಿ ಹಾಗೂ ಆಕ್ರಮಣಕಾರಿಯಾದ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ ಎಂದು ಇಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಯಾವುದೇ ಭಯವಿಲ್ಲದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬ್ಯಾಂಕ್ಗಳಲ್ಲಿ ಸರ್ಕಾರದ ಪಾಲನ್ನು ಶೇ 50ಕ್ಕಿಂತ ಕಡಿಮೆ ಮಾಡುವ ಅವಶ್ಯಕತೆಯಿದೆ ಎಂದು ಬ್ಯಾನರ್ಜಿ ಪ್ರತಿಪಾದಿಸಿದರು.
ಸುಮಾರು ಐದು ವರ್ಷಗಳಿಂದ ಹೆಚ್ಚುತ್ತಿರುವ ಎನ್‌ಪಿಎ ಪ್ರಮಾಣವು ಬ್ಯಾಂಕಿಂಗ್ ವ್ಯವಸ್ಥೆಯನ್ನೇ ತೊಂದರೆಗೆ ಸಿಲುಕುವಂತೆ ಮಾಡಿದೆ. ಬ್ಯಾಂಕ್ ವಲಯಗಳಲ್ಲಿನ ಹಗರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಮ್‌ಸಿ) ಹಗರಣ ಇತ್ತೀಚಿನ ಸೇರ್ಪಡೆಯಾಗಿದೆ.