ನವದೆಹಲಿ : ಸರ್ಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆಯು ಹೊಸ ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಇದು ಮಾರುಕಟ್ಟೆಯ ಸ್ವಾತಂತ್ರ್ಯದ ಹೊಸ ಯುಗವಾಗಲಿದೆ ಎಂಬುದರ ಸಂಕೇತವಾಗಿವೆ. ಭಾರತದ ಸಣ್ಣ ಹಿಡುವಳಿ ರೈತರ ಜೀವನಮಟ್ಟ ಸುಧಾರಿಸುವಲ್ಲಿ ಇವು ಬಹಳ ನೆರವಾಗಲಿವೆ.
ಈ ಕಾಯ್ದೆಗಳು ಮುಖ್ಯವಾಗಿ ಸಣ್ಣ ಹಿಡುವಳಿ ರೈತರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಒಟ್ಟು ರೈತರ ಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.85ರಷ್ಟಿದೆ. ಹಿಂಜರಿತ ಎಂಬುದು ಎಪಿಎಂಸಿ ನಿಯಂತ್ರಿತ ಮಾರುಕಟ್ಟೆ ಆಡಳಿತದ ಅತಿದೊಡ್ಡ ನರಳಾಟವಾಗಿದೆ ಎಂದಿದೆ.
ಕೃಷಿ ಕಾನೂನುಗಳು ರದ್ದುಗೊಳಿಸುವಂತೆ ಕೋರಿ ರಾಷ್ಟ್ರೀಯ ರಾಜಧಾನಿಯ ವಿವಿಧ ಗಡಿಗಳಲ್ಲಿ ದೀರ್ಘಕಾಲದವರೆಗೆ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಕಾಯ್ದೆಗಳನ್ನು ಬಜೆಟ್ ಪೂರ್ವದ ದಾಖಲೆಗಳು ಸಮರ್ಥಿಸಿಕೊಂಡಿವೆ.
ಹಲವು ಆರ್ಥಿಕ ಸಮೀಕ್ಷೆಗಳು ಎಪಿಎಂಸಿಗಳ ಕಾರ್ಯನಿರ್ವಹಣೆಯ ಮತ್ತು ಏಕಸ್ವಾಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. 2011-12, 2012-13, 2013-14, 2014-15, 2016-17 ಮತ್ತು 2019-20ರ ಆರ್ಥಿಕ ಸಮೀಕ್ಷೆಗಳು ಅಗತ್ಯವಿರುವ ಸುಧಾರಣೆಗಳ ಕೇಂದ್ರೀಕರಿಸಿವೆ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: ಆರ್ಥಿಕ ಸಮೀಕ್ಷೆ ಬಹಿರಂಗದ ಬೆನ್ನಲ್ಲೇ 588 ಅಂಕ ಕುಸಿದ ಸೆನ್ಸೆಕ್ಸ್
ಎಂ ಎಸ್ ಸ್ವಾಮಿನಾಥನ್ ಅವರ ಅಧ್ಯಕ್ಷತೆಯ ಕೃಷಿಕರ ರಾಷ್ಟ್ರೀಯ ಆಯೋಗ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಉದ್ಯೋಗ ಅವಕಾಶಗಳ ಕಾರ್ಯಪಡೆ ಸೇರಿದಂತೆ 2001ರಿಂದ ಕೃಷಿ ಮಾರುಕಟ್ಟೆ ಆಧಾರಿತ ಸುಧಾರಣೆಗಳ ಕುರಿತು ಮಾಡಿದ ಶಿಫಾರಸುಗಳು ಇದರಲ್ಲಿ ಒಳಗೊಂಡಿವೆ.
ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಕಾರ್ಖಾನೆ ಅಥವಾ ಖಾಸಗಿ ವಲಯಕ್ಕೆ ಮಾರಾಟದ ಆಯ್ಕೆ ನೀಡುತ್ತದೆ. ಕೃಷಿ ಮಾರುಕಟ್ಟೆ ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ಮತ್ತು ಅಗತ್ಯ ಸರಕುಗಳ ಕಾನೂನುಗಳು ಸಹ ಇದರಲ್ಲಿ ಸೇರಿವೆ.
ಹೊಸದಾಗಿ ಪರಿಚಯಿಸಲಾದ ಕೃಷಿ ಕಾನೂನುಗಳು ಮಾರುಕಟ್ಟೆಯ ಸ್ವಾತಂತ್ರ್ಯದ ಹೊಸ ಯುಗವನ್ನು ಸೂಚಿಸುತ್ತವೆ. ಭಾರತದಲ್ಲಿ ರೈತ ಕಲ್ಯಾಣ ಸುಧಾರಣೆಯಲ್ಲಿ ಬಹುದೂರ ಸಾಗಬಹುದು ಎಂದು ಸಮೀಕ್ಷೆ ತಿಳಿಸಿದೆ.
ಹೊಸ ಕೃಷಿ ಕಾನೂನುಗಳ ಪ್ರಯೋಜನಗಳನ್ನು ಒತ್ತಿ ಹೇಳುತ್ತಾ, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ನಾನಾ ನಿರ್ಬಂಧಗಳಿಂದ ಬಳಲುತ್ತಿದ್ದಾರೆ. ಅಧಿಸೂಚಿತ ಎಪಿಎಂಸಿ ಮಾರುಕಟ್ಟೆ ಅಂಗಳದ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ನಿರ್ಬಂಧಗಳಿವೆ. ರೈತರು ರಾಜ್ಯ ಸರ್ಕಾರಗಳ ನೋಂದಾಯಿತ ಪರವಾನಿಗೆದಾರರಿಗೆ ಮಾತ್ರ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಬಂಧಿಸಲಾಗಿತ್ತು ಎಂದು ಸಮೀಕ್ಷೆ ಹೇಳಿದೆ.