ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡನ್ ಗೆಲುವು ಸಾಧಿಸಿದ್ದು ಭಾರತದ ಇಂಧನ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಅಧ್ಯಕ್ಷರು ಇರಾನ್ ಮೇಲೆ ವಿಧಿಸಿದ್ದ ವಾಣಿಜ್ಯಾತ್ಮಕ ನಿರ್ಬಂಧಗಳ ಸಡಿಲಿಕೆ ಮಾಡಬಹುದು ಎಂದು ಇಂಧನ ತಜ್ಞರು 'ಈಟಿವಿ ಭಾರತ'ಗೆ ತಿಳಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಸ್ವಲ್ಪ ಸಮಯ ತೆಗೆದು ಈ ನಿರ್ಧಾರಕ್ಕೆ ಬರಬಹುದು. ಇದರ ಜತೆಗೆ ಇರಾನ್‌ನೊಂದಿಗಿನ ಪರಮಾಣು ಒಪ್ಪಂದ ಪುನರುಜ್ಜೀವನಗೊಳಿಸುವ ಸಾಧ್ಯತೆಯಿದೆ ಎಂದು ಪೆಟ್ರೋಲಿಯಂ ಮತ್ತು ಇಂಧನ ಅಧ್ಯಯನ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ಮುಖ್ಯಸ್ಥ ಡಾ. ಹಿರನ್ಮಾಯ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಮತ್ತು ದೇಶೀಯ ಇಂಧನ ಮಾರುಕಟ್ಟೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಡಾ. ರಾಯ್, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭೌಗೋಳಿಕ ರಾಜಕೀಯ ಸಮೀಕರಣಗಳು ಪ್ರಮುಖ ಪಾತ್ರವಹಿಸುತ್ತವೆ. ಹಳೆಯ ಒಪ್ಪಂದದ ಮರುಜೀವಂತಿಕೆಯು ನೆರೆಹೊರೆಯ ರಾಷ್ಟ್ರಗಳ ಮೇಲೆ ಸಕರಾತ್ಮಕ ಪ್ರಭಾವ ಬೀರುವಂತಹದ್ದು. ಹೀಗಾಗಿ, ಅಗ್ಗದ ದರದಲ್ಲಿ ತೈಲ ಆಮದು ಪಡೆಯಲು ಭಾರತಕ್ಕೆ ನೆರವಾಗುತ್ತೆ ಎಂದು ಹೇಳಿದ್ದಾರೆ.
ಬರಾಕ್ ಒಬಾಮಾ ಆಳ್ವಿಕೆಯ 2016ರಲ್ಲಿ ಜಾರಿಗೆ ಬಂದ ಜಂಟಿ ಸಮಗ್ರ ಯೋಜನೆ (ಜೆಸಿಪಿಎ) ಪುನರುಜ್ಜೀವನಗೊಳಿಸುವ ತಮ್ಮ ಬದ್ಧತೆಯನ್ನು ಬೈಡನ್ ಪುನರುಚ್ಚರಿಸಿದರು.
ಇರಾನ್ ಪರಮಾಣು ಒಪ್ಪಂದ ಎಂದು ಕರೆಯುವ ಅಮೆರಿಕ ಪ್ರಾಯೋಜಿತ ಜೆಸಿಪಿಎ ಇರಾನ್ ಮತ್ತು ಅಮೆರಿಕ, ಚೀನಾ, ಫ್ರಾನ್ಸ್, ಯುಕೆ, ರಷ್ಯಾ ಮತ್ತು ಜರ್ಮನಿ ನಡುವೆ ಸಹಿ ಹಾಕಲಾಗಿತ್ತು. ಸಮೃದ್ಧವಾಗಿ ಯುರೇನಿಯಂ ದಾಸ್ತಾನು ತಡೆಗೆ ಒಪ್ಪಿದರೆ ಇರಾನ್‌ನ ತೈಲ ರಫ್ತಿಗೆ ನಿರ್ಬಂಧಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ ಒಪ್ಪಂದ ಮಾಡಲಾಗಿತ್ತು.
ಟ್ರಂಪ್ ಆಡಳಿತದಲ್ಲಿ ನಿರ್ಬಂಧಗಳು ಜಾರಿಗೆ ಬರುವ ಮೊದಲೇ ಇರಾನ್ ಭಾರತಕ್ಕೆ ಮೂರನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿತ್ತು. ಒಂದು ಅಂದಾಜಿನ ಪ್ರಕಾರ, ಭಾರತವು 2018-19ರಲ್ಲಿ ಸುಮಾರು 2.4 ಕೋಟಿ ಟನ್ ಕಚ್ಚಾ ತೈಲ ಆಮದು ಮಾಡಿಕೊಂಡಿತ್ತು. 2017-18ರಲ್ಲಿ 2.2 ಕೋಟಿ ಟನ್ ಆಗಿತ್ತು.
ಭಾರತವು ನಿವ್ವಳ ತೈಲ ಆಮದುದಾರರಾಗಿದ್ದು, ಅಮೆರಿಕ-ಇರಾನ್ ಸಕಾರಾತ್ಮಕ ಸಂಬಂಧಗಳು ಖಂಡಿತವಾಗಿಯೂ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಆಗಲು ಭಾರತದ ತೈಲ ಮಾರುಕಟ್ಟೆ ಕಂಪನಿಗಳಿಗೆ ನೆರವಾಗುತ್ತದೆ ಎಂಬುದು ಡಾ. ರಾಯ್ ವಿಶ್ಲೇಷಣೆ.