ನವದೆಹಲಿ: ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಮತ್ತು ಸಂಬಂಧಿತ ಇತರ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.
ಜುಲೈ- ಸೆಪ್ಟೆಂಬರ್ ಅವಧಿಯ 2ನೇ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಶೇ 8 ಪ್ರತಿಶತದಿಂದ ಶೇ 7.9 ಅಂಶಕ್ಕೆ ಇಳಿಕೆ ಮಾಡಿದೆ. ಬಡ್ಡಿದರದಲ್ಲಿ ಶೇ 0.1ರಷ್ಟು ಕಡಿಮೆ ಆಗಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಜಿಪಿಎಫ್ ಭವಿಷ್ಯ ನಿಧಿಯ ಖಾತೆಯಾಗಿದ್ದು, ಸರ್ಕಾರಿ ನೌಕರರು ಮಾತ್ರ ಇದರ ಸದಸ್ಯರಾಗಲು ಅರ್ಹತೆ ಹೊಂದಿರುತ್ತಾರೆ. ಈ ನಿಧಿಗೆ ಸರ್ಕಾರಿ ನೌಕರರು ತಮ್ಮ ವೇತನದ ಒಂದು ಭಾಗವನ್ನು ನೀಡುತ್ತಾರೆ. ನಿವೃತ್ತಿಯ ಸಮಯದಲ್ಲಿ ಸಂಗ್ರಹವಾದ ನಿಧಿಗೆ ಅದು ಸೇರ್ಪಡೆ ಆಗುತ್ತದೆ.
2019- 20ರ ಅವಧಿಯ ಸಾಮಾನ್ಯ ಭವಿಷ್ಯ ನಿಧಿ ಮತ್ತು ಸಂಬಂಧಿತ ಇತರ ಯೋಜನೆಗಳ ಮೇಲಿನ ಬಡ್ಡಿ ದರವು 2019ರ ಜುಲೈ 1ರಿಂದ 2019ರ ಸೆಪ್ಟೆಂಬರ್ 30 ರವರೆಗೆ ಶೇ 7.9ರಷ್ಟು ಅನ್ವಯಿಸುತ್ತದೆ ಎಂದು ಹೇಳಿದೆ.
2003ರ ಡಿಸೆಂಬರ್ 31 ಅಥವಾ ಇದಕ್ಕೂ ಮೊದಲು ನೇಮಕಗೊಂಡಿರುವ ಕೇಂದ್ರ ಸರ್ಕಾರಿ ನೌಕರರಿಗೆ ಜಿಪಿಎಫ್ ನಿಯಮಗಳು ಅನ್ವಯವಾಗುತ್ತವೆ. ನೌಕರರು ತಮ್ಮ ಖಾತೆ ತೆರೆಯುವ ಸಮಯದಲ್ಲಿ ಯಾರನ್ನಾದರೂ ನಾಮನಿರ್ದೇಶನ ಮಾಡಬಹುದು. ಕಡಿಮೆ ಬಡ್ಡಿದರವು ಕೇಂದ್ರ ಸರ್ಕಾರಿ ನೌಕರರು, ರೈಲ್ವೆ ಮತ್ತು ರಕ್ಷಣಾ ಪಡೆಗಳ ಭವಿಷ್ಯ ನಿಧಿಗೂ ಅನ್ವಯಿಸುತ್ತದೆ.