ನವದೆಹಲಿ: 150 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ 388 ಮೂಲಸೌಕರ್ಯ ಯೋಜನೆಗಳು ವಿಳಂಬ ಮತ್ತು ಇತರ ಕಾರಣಗಳಿಂದಾಗಿ ಹೆಚ್ಚುವರಿಯಾಗಿ 4 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಹಣ ಬೇಡುತ್ತಿವೆ ಎಂದು ವರದಿಯೊಂದು ತಿಳಿಸಿದೆ.
ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು 150 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಮೂಲಸೌಕರ್ಯ ಯೋಜನೆಗಳ ಮೇಲ್ವಿಚಾರಣೆ ಮಾಡುತ್ತಿದೆ. 1,636 ಯೋಜನೆಗಳ ಪೈಕಿ 388 ಯೋಜನೆಗಳು ಈಗಾಗಲೇ ನಿಗದಿತ ವೆಚ್ಚವನ್ನು ಮೀರಿವೆ. 563 ಯೋಜನೆಗಳು ಪೂರ್ಣಗೊಳಲು ಇನ್ನಷ್ಟು ಸಮಯ ಬೇಡುತ್ತಿವೆ ಎಂಬುದು ವರದಿಯಲ್ಲಿ ಬೆಳಕಿಗೆ ಬಂದಿದೆ.
1,636 ಯೋಜನೆಗಳ ಅನುಷ್ಠಾನದ ಒಟ್ಟು ಮೂಲ ವೆಚ್ಚವು 19,52,524.85 ಕೋಟಿ ರೂ. ಮತ್ತು ಅವುಗಳ ನಿರೀಕ್ಷಿತ ಪೂರ್ಣಗೊಳಿಸುವಿಕೆ ವೆಚ್ಚ 23,53,108.80 ಕೋಟಿ ರೂ.ವರೆಗೂ ಆಗಬಹುದು. ಹೆಚ್ಚುವರಿಯ ಒಟ್ಟಾರೆ ವೆಚ್ಚ 4,00,583.95 ಕೋಟಿ ರೂ. (ಮೂಲ ವೆಚ್ಚದ ಶೇ 20.52ರಷ್ಟು) ಆಗಲಿದೆ ಎಂದು ಸಚಿವಾಲಯದ ಇತ್ತೀಚಿನ ವರದಿ ಹೇಳಿದೆ.
ವರದಿಯ ಪ್ರಕಾರ, 2019ರ ಅಕ್ಟೋಬರ್ವರೆಗೆ ಈ ಯೋಜನೆಗಳಿಗೆ ಮಾಡಿದ ಖರ್ಚು ₹ 10 ಲಕ್ಷ ಕೋಟಿ ಇದ್ದು, ಯೋಜನೆಗಳ ನಿರೀಕ್ಷಿತ ವೆಚ್ಚದ ಶೇ 43.86 ರಷ್ಟಿದೆ. ಇದರಲ್ಲಿ
720 ಯೋಜನೆಗಳ ಕಾರ್ಯಾರಂಭ ಮಾಡಿದ ವರ್ಷ ಅಥವಾ ತಾತ್ಕಾಲಿಕ ಅವಧಿ ಬಗ್ಗೆ ವರದಿಯಾಗಿಲ್ಲ. 563 ವಿಳಂಬವಾದ ಯೋಜನೆಗಳಲ್ಲಿ 1 ರಿಂದ 12 ತಿಂಗಳ ವ್ಯಾಪ್ತಿಯಲ್ಲಿ 185 ಯೋಜನೆಗಳು, 13 ರಿಂದ 24 ತಿಂಗಳ ವ್ಯಾಪ್ತಿಯಲ್ಲಿ 123 ಯೋಜನೆಗಳು, 25 ರಿಂದ 60 ತಿಂಗಳ ವ್ಯಾಪ್ತಿಯಲ್ಲಿ 136 ಯೋಜನೆಗಳು ಹಾಗೂ 61 ತಿಂಗಳು ಮೇಲ್ಪಟ್ಟು 119 ಯೋಜನೆಗಳಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಸಮಯದ ಅತಿಕ್ರಮಣಕ್ಕೆ ಭೂಸ್ವಾಧೀನ, ಅರಣ್ಯ ತೆರವು ಮತ್ತು ಉಪಕರಣಗಳ ಪೂರೈಕೆಯಲ್ಲಿನ ವಿಳಂಬ ಕಾರಣವೆಂದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಹೇಳಿದೆ.