ನವದೆಹಲಿ: ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸಿದ ಬಳಿಕ ಭಾರತವು ಜೂನ್‌ನಿಂದ 'ವಿ-ಆಕಾರದ' ಚೇತರಿಕೆ ಕಾಣುತ್ತಿದೆ ಎಂದು ಹಣಕಾಸು ಸಚಿವಾಲಯದ ವರದಿ ತಿಳಿಸಿದೆ.
ಆರ್ಥಿಕ ಸೂಚಕಗಳಲ್ಲಿನ ನಿರಂತರ ಸುಧಾರಣೆಯು ವರ್ಷದ ದ್ವಿತೀಯಾರ್ಧದಲ್ಲಿ ಸುಧಾರಿತ ಕಾರ್ಯಕ್ಷಮತೆಯ ಆಶಾವಾದ ಮೂಡಿಸುತ್ತಿದೆ. ಡಿಸೆಂಬರ್‌ನ ಮಾಸಿಕ ಆರ್ಥಿಕ ಚೇತರಿಕೆ ಕೂಡ ಮುಂಬರುವ ವ್ಯಾಕ್ಸಿನೇಷನ್ನಿಂದ ಜಾಗತಿಕ ಆರ್ಥಿಕ ಚಟುವಟಿಕೆಯೂ ವೇಗ ಪಡೆಯಲಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಅಂದಾಜಿಸಿದೆ.
ಸಾಲು-ಸಾಲು ಹಬ್ಬದ ದಿನಗಳು ಮತ್ತು ಚಳಿಗಾಲ ಆರಂಭದ ಹೊರತಾಗಿಯೂ ಕೋವಿಡ್ -19 ಸೋಂಕು ಹರಡುವಿಕೆಯ ಪರಿಣಾಮಕಾರಿ ನಿರ್ವಹಣೆ, ಆವರ್ತನ ಸೂಚಕಗಳಲ್ಲಿ ನಿರಂತರ ಸುಧಾರಣೆ ಕಂಡುಬಂದಿದೆ. ಲಾಕ್ಡೌನ್ ನಿರ್ಬಂಧ ತೆರವಿನ ಬಳಿಕ 'ವಿ'-ಆಕಾರದ ಚೇತರಿಕೆಯೊಂದಿಗೆ ಭಾರತೀಯ ಆರ್ಥಿಕತೆ ಸಾಗುತ್ತಿದೆ. ಕೋವಿಡ್ ಅಲೆಯ ವಿರುದ್ಧದ ಸವಾರಿಗೆ ಇದುವೇ ಸಾಕ್ಷಿಯಾಗಿದೆ ಎಂದಿದೆ.
ಇದನ್ನೂ ಓದಿ: SBIನ 3,000 ಎಟಿಎಂಗಳಿಗೆ ಸಿಎಂಎಸ್ ಇನ್ಫಾರ್ಮೇಷನ್ ಸಿಸ್ಟಮ್ ಅಳವಡಿಕೆ
ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯ ಪ್ರಕಾಶಮಾನ ತಾಣವಾಗಿ ಈಗಲೂ ಉಳಿದಿದೆ. ವರ್ಷದಿಂದ ವರ್ಷಕ್ಕೆ ರಬಿ ಬಿತ್ತನೆ, ಟ್ರ್ಯಾಕ್ಟರ್ ಮಾರಾಟ ವೇಗಗೊಂಡಿದೆ. ಜಲಾಶಯಗಳ ನೀರಿನ ಶೇಖರಣೆಯಲ್ಲಿನ ಶೇ. 2.9ರಷ್ಟು ಬೆಳವಣಿಗೆಯು ದಶಕದ ಸರಾಸರಿ ಶೇ. 122ರಷ್ಟಿದೆ.
ಡಿಇಎ ವರದಿಯ ಪ್ರಕಾರ, ದಾಖಲೆಯ ಸಂಗ್ರಹಣೆಯೊಂದಿಗೆ ಕನಿಷ್ಠ ಬೆಂಬಲ ಬೆಲೆಗಳು ಸಹ ಏರಿಕೆಯಾಗಿವೆ. ಎಂಜಿಎನ್‌ಆರ್‌ಇಜಿಎಸ್ ಮೂಲಕ ವೇತನ ಉದ್ಯೋಗದ ಉತ್ಪಾದನೆ ಚುರುಕುಗೊಂಡಿದ್ದು, ಗ್ರಾಮೀಣ ಆದಾಯ ಹೆಚ್ಚಳಕ್ಕೆ ನೆರವಾಗಿದೆ. ಗ್ರಾಮೀಣ ತೊಂದರೆಗಳನ್ನು ನಿವಾರಿಸುವಲ್ಲಿ ಪಿಎಂಜಿಕೆವೈ ಯಶಸ್ವಿಯಾಗಿದೆ.
ಗ್ರಾಮೀಣ ಆದಾಯದ ಈ ಏರಿಕೆಯು ಆರೋಗ್ಯಕರವಾಗಿದ್ದರಿಂದ ಪ್ರಯಾಣಿಕರ ವಾಹನ, ಬೈಕ್ ಮತ್ತು ಮೂರು ಚಕ್ರಗಳ ಹಾಗೂ ಟ್ರ್ಯಾಕ್ಟರ್ಗಳ ಮಾರಾಟದಲ್ಲಿ ಪ್ರತಿಬಿಂಬಿಸುತ್ತಿದೆ. 2020ರ ಮಾರ್ಚ್ ನಂತರ ಮೊದಲ ಬಾರಿಗೆ ವಾಹನ ನೋಂದಣಿಯಲ್ಲಿ ಹಳೆಯ ಲಯಕ್ಕೆ ಮರುಕಳಿಸಿದೆ ಎಂದು ಹೇಳಿದೆ.
ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಅಕ್ಟೋಬರ್‌ನ ಹಬ್ಬದ ಋತುವಿಗೆ ಸಮವಾಗಿ ನಡೆದ ಉತ್ಪಾದನೆ ಮತ್ತು ವಿದ್ಯುತ್ ಕ್ಷೇತ್ರದ ನೇತೃತ್ವದಲ್ಲಿ ಎಂಟು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಪ್ರಮುಖ ಕೈಗಾರಿಕೆಗಳು ನವೆಂಬರ್‌ನಲ್ಲಿ ಸ್ವಲ್ಪ ಕುಸಿತ ಕಂಡರೆ, ಕಲ್ಲಿದ್ದಲು ಉತ್ಪಾದನೆ, ವಿದ್ಯುತ್ ಮತ್ತು ರಸಗೊಬ್ಬರ ಉತ್ಪಾದನೆಯು ಬೆಳವಣಿಗೆ ದಾಖಲಿಸಿವೆ.
ಏನಿದು ವಿ ಆಕಾರ ಚೇತರಿಕೆ?
V - ಆಕಾರದ ಚೇತರಿಕೆ ಎಂದರೆ ಪುನಶ್ಚೇತನದ ಚಾರ್ಟಿಂಗ್‌ನಲ್ಲಿ "ವಿ" (V) ಆಕಾರ ಹೋಲುತ್ತದೆ. ಸರಳವಾಗಿ ಹೇಳುವುದಾದರೆ ತೀವ್ರ ಕುಸಿತದ ಬಳಿಕ ಹಿಂದಿನ ಗರಿಷ್ಠ ಮಟ್ಟಕ್ಕೆ ತೀಕ್ಷ್ಣವಾಗಿ ಏರಿಕೆ ಕಾಣುತ್ತದೆ. ತೀಕ್ಷ್ಣ ಆರ್ಥಿಕ ಕುಸಿತದ ನಂತರ ಆರ್ಥಿಕ ಕಾರ್ಯಕ್ಷಮತೆಯು ತ್ವರಿತ ಮತ್ತು ನಿರಂತರ ಚೇತರಿಕೆಯಿಂದ ಕೂಡಿರುತ್ತದೆ.