ನವದೆಹಲಿ: ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಅಮೆರಿಕಾ ನಿವಾಸಿ ಅಭಿಜಿತ್ ಬ್ಯಾನರ್ಜಿ ಅವರು, ಕಳೆದ ಕೆಲ ದಿನಗಳಿಂದ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗುತ್ತಿದ್ದಾರೆ.
ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯ ನ್ಯಾಯ್ ಯೋಜನೆಯನ್ನು ಬೆಂಬಲಿಸಿ ಮಾತನಾಡಿದ್ದರು ಎಂಬುದು ವಿವಾದದ ಕೇಂದ್ರ ಬಿಂದು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈಚೆಗೆ ಸುದ್ದಿಗೋಷ್ಠಿಯಲ್ಲಿ 'ಅಭಿಜಿತ್ ಅವರು ಕಾಂಗ್ರೆಸ್ನ ನ್ಯಾಯ್ ಅನ್ನು ಬೆಂಬಲಿಸಿದ್ದಾರೆ. ಆದರೆ, ಭಾರತೀಯರು ಅದನ್ನು ತಿರಸ್ಕರಿಸಿದ್ದಾರೆ. ಅಭಿಜಿತ್ ಬ್ಯಾನರ್ಜಿ ಅವರು ಎಡಪಂಥೀಯ ಒಲವು ಇರುವವರು' ಎಂದು ವ್ಯಂಗ್ಯವಾಡಿದ್ದರು.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬ್ಯಾನರ್ಜಿ ಅವರು, ಆಡುಭಾಷೆ ಪಂದ್ಯಗಳಲ್ಲಿ (ಸ್ಲ್ಯಾಂಜಿಂಗ್ ಮ್ಯಾಚಿಂಗ್) ಭಾಗಿಯಾಗಲು ನಾನು ಸಿದ್ಧವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ನಮ್ಮ ನಡುವೆ ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ, ಭಾರತದ ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿದೆ ಎಂದು ತೋರಿಸಲು ಸಾಕಷ್ಟು ಪುರಾವೆಗಳಿವೆ. ಕಾರ್ಪೊರೇಟ್ ತೆರಿಗೆ ಕಡಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ. ನಾನು ನ್ಯಾಯ್ ಯೋಜನೆಯ ಅಂತಿಮ ವಿನ್ಯಾಸದ ಭಾಗವಾಗಿರಲಿಲ್ಲ. ಜನಸಂಖ್ಯೆಯ ಶೇ.20ರಷ್ಟು ಬಡವರ ಸಂಬಂಧಿಸಿದ ದತ್ತಾಂಶಗಳಿಗೆ ನೆರವಾಗುವಂತೆ ಅವರು ನನ್ನನ್ನು ಕೋರಿದ್ದರು. ಅಷ್ಟು ಮಾತ್ರವೇ ನನ್ನ ಪಾತ್ರ ಎಂದು ಹೇಳಿದ್ದಾರೆ.