ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿಯಲ್ಲಿ ಚೊಚ್ಚಲ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಕಳೆದ ಸೆಪ್ಟೆಂಬರ್ನಲ್ಲಿ ಅಮೆರಿಕದ ಹ್ಯೂಸ್ಟನ್ನಲ್ಲಿ ಆಯೋಜಿಸಲಾಗಿದ್ದ 'ಹೌಡಿ ಮೋದಿ' ಮಾದರಿಯಲ್ಲಿ ಟ್ರಂಪ್ಗಾಗಿ ಅಂತಹದ್ದೇ ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಟ್ರಂಪ್ ಭಾರತ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ವಾಷಿಂಗ್ಟನ್‌ನಿಂದ ಭದ್ರತಾ ಹಾಗೂ ಲಾಜಿಸ್ಟಿಕ್ ತಂಡಗಳು ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿವೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಆದರೆ, ಟ್ರಂಪ್ ಭಾರತ ಭೇಟಿಯ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಟ್ರಂಪ್ ಭಾರತ ಭೇಟಿಯ ಸಾಧ್ಯತೆಯನ್ನು ಅಮೆರಿಕಾದ ಅಧಿಕೃತ ಮೂಲಗಳು ಖಚಿತಪಡಿಸಿವೆ.
ಕಳೆದ ಸೆಪ್ಟೆಂಬರ್ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹ್ಯೂಸ್ಟನ್ನ ಎನ್ಆರ್ಜಿ ಫುಟ್ಬಾಲ್ ಕ್ರೀಡಾಂಗಣದಲ್ಲಿ 'ಹೌಡು ಮೋದಿ' ಕಾರ್ಯಕ್ರಮ ನಡೆಸಲಾಯಿತು. ಹಲವು ಕಾರಣಗಳಿಗೆ ವಿಶಷ್ಟ ಎನಿಸಿಕೊಂಡಿದ್ದ ಆ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತ್ತು. ಇದೇ ಮಾದರಿಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಗುಜರಾತ್ನ ಅಹಮದಾಬಾದ್ನಲ್ಲಿ 'ಹೌಡಿ ಟ್ರಂಪ್' ಆಯೋಜಿನೆಯ ಕಸರತ್ತುಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಗುಜರಾತ್ ಮೂಲದ ಅಮೆರಿಕ ನಿವಾಸಿಗರು 'ಹೌಡಿ ಟ್ರಂಪ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ವರ್ಷದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಲಕ್ಷಾಂತರ ಭಾರತೀಯ ವಲಸಿಗರು ಅಮೆರಿಕದಲ್ಲಿ ನೆಲೆ ನಿಂತಿದ್ದಾರೆ. ಅನಿವಾಸಿ ಭಾರತೀಯರು ಚುನಾವಣೆ ಗೆಲುವಿನಲ್ಲಿ ಮುಖ್ಯವಾಗಿ ಗುಜರಾತ್ ಮೂಲದವರು ಹೆಚ್ಚಿನ ಪಾತ್ರವಹಿಸಲಿದ್ದಾರೆ. ಚುನಾವಣೆಯಲ್ಲಿ ವಲಸಿಗ ಭಾರತೀಯರ ಮತಗಳನ್ನು ಲೇಬರ್ ಪಕ್ಷದಿಂದ ಕನ್ಸರ್ವೆಟಿವ್ಸ್ನತ್ತ ಸೆಳೆಯಲು ಈ ಕಾರ್ಯಕ್ರಮ ನೆರವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ಸಹ ಇದರ ಹಿಂದಿದೆ.
ಇದೇ ವೇಳೆ ಅಲ್ಪಕಾಲದ ವಾಣಿಜ್ಯ ಒಪ್ಪಂದಗಳಿಗೆ ಮೋದಿ- ಟ್ರಂಪ್ ಸಹಿಹಾಕುವ ಸಾಧ್ಯತೆಗಳಿವೆ. ಭಾರತದಲ್ಲಿ ಅಮೆರಿಕ ಕಂಪನಿಗಳು ಸುಲಭವಾಗಿ ವಹಿವಾಟು ನಡೆಸುವ ಹಾಗೂ ಮಾರುಕಟ್ಟೆ ವಿಸ್ತರಣೆಯ ಬಗ್ಗೆ ಚರ್ಚಿಸಲಿವೆ. ಇದರ ಜೊತೆಗೆ ದೀರ್ಘಾವಧಿಯ ವಾಣಿಜ್ಯಾತ್ಮಕ ಮುಕ್ತ ವ್ಯಾಪಾರದ ಕುರಿತು ಮಾತುಕತೆ ಆಡಲಿದ್ದಾರೆ ಎನ್ನಲಾಗುತ್ತಿದೆ.