ನವದೆಹಲಿ: ಆರ್‌ಬಿಐ ಘೋಷಿಸಿದ ಸಾಲ ಮರುಪಾವತಿಯ ಮೂರು ತಿಂಗಳ ನಿಷೇಧದ ಹೊರತಾಗಿಯೂ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಎರಡು- ಮೂರು ದಿನಗಳಲ್ಲಿ ಹಣಕಾಸು ಪ್ಯಾಕೇಜ್ ಬರುವ ನಿರೀಕ್ಷೆ ಇದೆ ಎಂಬ ಅಭಯ ನೀಡಿದ್ದಾರೆ.
ಎಂಎಸ್‌ಎಂಇ ಮತ್ತು ರಸ್ತೆ ಸಾರಿಗೆ ಸಚಿವ ತೆಲಂಗಾಣದ ಉದ್ಯಮಿ ಪ್ರತಿನಿಧಿಗಳ ಜತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿ, ಸರ್ಕಾರವು ಉದ್ಯಮಗಳ ಜೊತೆ ನಿಂತಿದೆ. ಆದರೆ, ನೀವೂ ಕೂಡ ಸರ್ಕಾರದ ಇತಿ ಮಿತಿಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.
ನಾವು ಎಲ್ಲರನ್ನೂ ಹೇಗೆ ರಕ್ಷಿಸಬಹುದು ಎಂಬುದರ ಕುರಿತು ಉತ್ತಮವಾಗಿಯೇ ಪ್ರಯತ್ನಿಸುತ್ತಿದ್ದೇವೆ. ಜಪಾನ್ ಮತ್ತು ಅಮೆರಿಕ ಸರ್ಕಾರಗಳು ಮೆಗಾ ಪ್ಯಾಕೇಜ್‌ಗಳನ್ನು ಘೋಷಿಸಿದ್ದರೂ ಅವರ ಆರ್ಥಿಕತೆಯು ಭಾರತದ ಆರ್ಥಿಕತೆಗಿಂತ ದೊಡ್ಡದಾಗಿದೆ ಎಂದರು.
ಜನರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಣೆಯ ಭಾಗವಾಗಿ ರಿಸರ್ವ್ ಬ್ಯಾಂಕ್, ಮಾರ್ಚ್ 27ರಂದು ಸಾಲ ಮರುಪಾವತಿಯ ಮೂರು ಕಂತುಗಳ ವಿನಾಯತಿ ಸೇರಿ ಹಲವು ಕ್ರಮಗಳನ್ನು ಘೋಷಿಸಿತ್ತು.
ಆದಾಯ ತೆರಿಗೆ ಮತ್ತು ಜಿಎಸ್ಟಿ ಬಾಕಿ ಪಾವತಿಗಳನ್ನು ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದಾದ ಯಾಂತ್ರಿಕ ವ್ಯವಸ್ಥೆ ಕಂಡುಕೊಳ್ಳುವಂತೆ ಹಣಕಾಸು ಸಚಿವಾಲಯಕ್ಕೆ ಸೂಚಿಸಿದ್ದೇವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಹಾಗೂ ಉದ್ಯಮಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಹಣಕಾಸು ಸಚಿವರು ಮತ್ತು ಪ್ರಧಾನಿಗಳ ಜತೆ ಹಂಚಿಕೊಂಡಿದ್ದೇನೆ ಎಂದು ಗಡ್ಕರಿ ಹೇಳಿದರು.