ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಮೋದಿ ಸರ್ಕಾರದ ಆರ್ಥಿಕ ನಿರ್ವಹಣೆಯ ವಿರುದ್ಧ ಹರಿಹಾಯ್ದಿದ್ದಾರೆ. 'ಇದೊಂದು ತೀರಾ ಅಸಮರ್ಥ ವೈದ್ಯರ ತಂಡವೆಂದು' ವ್ಯಂಗ್ಯವಾಡಿದರು.
2020-21ರ ಕೇಂದ್ರ ಬಜೆಟ್ ಕುರಿತ ಸಂಸತ್ ಚರ್ಚೆಯ ವೇಳೆ ಮಾತನಾಡಿದ ಅವರು, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಉಪಭೋಗದ ಕುಸಿತವು ಭಾರತವನ್ನು ಬಡವಾಗಿಸುತ್ತಿದೆ ಎಂದು ಟೀಕಿಸಿದರು.
ಆರ್ಥಿಕತೆಯು ಬೇಡಿಕೆಯ ನಿರ್ಬಂಧಗಳನ್ನು ಎದುರಿಸುತ್ತಿದೆ. ಹೂಡಿಕೆಯು ಕುಸಿಯುತ್ತಿದೆ. ತತ್ಪರಿಣಾಮ ಆರ್ಥಿಕತೆಯ ಉಪಭೋಗದ ಮಟ್ಟ ಸಹ ಇಳಿಕೆಯಾಗುತ್ತಿದೆ. ಹೆಚ್ಚು-ಹೆಚ್ಚು ನಿರುದ್ಯೋಗವನ್ನು ಎದುರಿಸುತ್ತಿದೆ. ದೇಶದಲ್ಲಿ ಭಯ ಮತ್ತು ಅನಿಶ್ಚಿತತೆಯು ಮೇಲುಗೈ ಸಾಧಿಸಿದೆ ಎಂದರು.
ನಾಲ್ಕು ವರ್ಷಗಳ ಕಾಲ ಬಿಜೆಪಿ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ 'ಆರ್ಥಿಕತೆ ಐಸಿಯು'ನಲ್ಲಿದೆ ಎಂದು ಹೇಳಿದ್ದಾರೆ. ಈಗ ನಾನು ರೋಗಿಯನ್ನು ಐಸಿಯುನಿಂದ ಹೊರಗಿಡಲಾಗಿದೆ ಎಂದು ಹೇಳುತ್ತೇನೆ. ಅಸಮರ್ಥ ವೈದ್ಯರು ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.
ರೋಗ ಪೀಡಿತರನ್ನು ಐಸಿಯುನಿಂದ ಹೊರಗಿಡುವುದು ಮತ್ತು ಅಸಮರ್ಥ ವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಅತ್ಯಂತ ಅಪಾಯಕಾರಿ. ಸುತ್ತಲೂ ನಿಂತು 'ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್' ಎಂಬ ಘೋಷಣೆ ಜಪಿಸುವುದರಿಂದ ಏನು ಪ್ರಯೋಜನವಿದೆ ಎಂದು ಪ್ರಶ್ನಿಸಿದರು.
ಮೋದಿ ಸರ್ಕಾರವು ಪ್ರತಿ ಸಮರ್ಥ ವೈದ್ಯರನ್ನೂ ಮನೆಗೆ ಸೇರಿಸಿತು. ಅಂತಹ ವ್ಯಕ್ತಿಗಳ ಪಟ್ಟಿಯಲ್ಲಿ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ಮಾಜಿ ಸಿಇಎ ಅರವಿಂದ್ ಸುಬ್ರಮಣಿಯನ್, ಮಾಜಿ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಮತ್ತು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಾಗರಿಯಾ ಸೇರಿದ್ದಾರೆ ಎಂದರು.
'ನಿಮ್ಮ ವೈದ್ಯರು ಯಾರು, ನಾನು ತಿಳಿದುಕೊಳ್ಳಲು ಬಯಸುತ್ತೇನೆ'. ಕೇಂದ್ರ ಸರ್ಕಾರ ಕಾಂಗ್ರೆಸ್‌ನ ಅಸ್ಪೃಶ್ಯರೆಂದು ಪರಿಗಣಿಸುತ್ತದೆ. ಉಳಿದ ಪ್ರತಿಪಕ್ಷಗಳ ಒಳ್ಳೆಯದರ ಬಗ್ಗೆ ಯೋಚಿಸುತ್ತಿಲ್ಲ. ಮೋದಿ ಸರ್ಕಾರ ಜನರ ಕೈಯಲ್ಲಿರುವ ಹಣವನ್ನು ಕಾರ್ಪೊರೇಟ್ ತೆರಿಗೆ ಕಡಿತದ ಮೂಲಕ ಆ ಹಣವನ್ನು 200 ಕಾರ್ಪೊರೇಟ್‌ಗಳ ಕೈಯಲ್ಲಿಡುತ್ತಿದೆ ಎಂದು ಚಿದಂಬರಂ ಆರೋಪಿಸಿದರು.