ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಈವರೆಗೆ ಸುಮಾರು 36 ಲಕ್ಷ ತೆರಿಗೆದಾರರಿಗೆ 1.21 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ಮಾಡಿದೆ.
34 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ 33,000 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು 1.83 ಲಕ್ಷ ಪ್ರಕರಣಗಳಲ್ಲಿ 88,000 ಕೋಟಿ ರೂ.ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ.
ಸಿಬಿಡಿಟಿ ಏಪ್ರಿಲ್ 1 ಮತ್ತು ಅಕ್ಟೋಬರ್ 6ರ ನಡುವೆ 35.93 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 1,21,607 ಕೋಟಿ ರೂ. ಮರುಪಾವತಿ ನೀಡಿರುತ್ತದೆ. 34,09,246 ಪ್ರಕರಣಗಳಲ್ಲಿ 33,238 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು 88,370 ಕೋಟಿ ರೂ. ಅನ್ನು 83,773 ಕಾರ್ಪೊರೇಟ್ ತೆರಿಗೆದಾರರಿಗೆ ಪಾವತಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಮರುಪಾವತಿಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಒತ್ತು ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ಈ ಹಿಂದೆಯೇ ಹೇಳಿತ್ತು.