ಬೀಜಿಂಗ್: ತೀವ್ರ ಆರ್ಥಿಕ ಸಂಕಷ್ಟ ಹಾಗೂ ಜಿಡಿಪಿ ಕುಸಿತದಿಂದ ನಲುಗಿರುವ ನೆರೆಯ ಪಾಕಿಸ್ತಾನದ ಜೊತೆಗೆ ಅದರ ಪರಮಾಪ್ತ ಚೀನಾ ಕೂಡ ಈಗ ಸೇರ್ಪಡೆಯಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ಚೀನಾದ ಆರ್ಥಿಕ ಅಭಿವೃದ್ಧಿಯ ಒಟ್ಟು ದೇಶಿ ಉತ್ಪಾದನೆ (ಜಿಡಿಪಿ) ಶೇ. 6ರಷ್ಟು ಕುಸಿತ ಕಂಡಿದೆ. ಈ ತ್ರೈಮಾಸಿಕದಲ್ಲಿನ ಜಿಡಿಪಿಯು ಕಳೆದ ಮೂರು ದಶಕಗಳಲ್ಲಿಯೇ ದಾಖಲೆ ಕನಿಷ್ಠ ಮಟ್ಟದಲ್ಲಿ ಕುಸಿತ ಕಂಡಂತಾಗಿದೆ ಎಂದು ವರದಿ ತಿಳಿಸಿದೆ.
ಸುಂಕ ದರ ಏರಿಕೆಯಲ್ಲಿ ಅಮೆರಿಕದೊಂದಿಗೆ ಟ್ರೇಡ್ ವಾರ್ಗೆ ಇಳಿದ ಚೀನಾ, ತನ್ನ ದೇಶಿ ಉತ್ಪನ್ನಗಳ ಬೇಡಿಕೆಯನ್ನು ತೀವ್ರ ಪ್ರಮಾಣದಲ್ಲಿ ಕಳೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಒಂದು ರಾಷ್ಟ್ರದ ಬೆಳವಣಿಗೆಯನ್ನು ನಿರ್ಧರಿಸುವ ಜಿಡಿಪಿಯ ಕುಸಿತವು ಚೀನಾಕ್ಕೆ ಆತಂಕ ತರಿಸಿದೆ. ಈ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಶೇ. 6ಕ್ಕೆ ಇಳಿಕೆಯಾಗಿದ್ದು, ಹಿಂದಿನ ಎರಡನೇ ತ್ರೈಮಾಸಿಕದಲ್ಲಿ ಅದರ ಜಿಡಿಪಿಯು ಶೇ. 6.2ರಷ್ಟಿತ್ತು. 1992ರ ನಂತರ ಚೀನಾ ಅತಿ ಕನಿಷ್ಠ ಮಟ್ಟದ ಜಿಡಿಪಿಯನ್ನು ಈ ವರ್ಷ ದಾಖಲಿಸಿದೆ.