ನವದೆಹಲಿ: ಜಂಟಿ ಸಹಭಾಗಿತ್ವದ ಮೂಲಕ ಬೃಹತ್ ವ್ಯಾಪಾರ ಕೊರತೆ ಕಡಿಮೆ ಮಾಡಿ ಔಷಧ ಮತ್ತು ಸಾಫ್ಟ್‌ವೇರ್ ಸೇರಿದಂತೆ ಭಾರತದ ಬಹುಕಾಲದಿಂದ ಬಾಕಿ ಉಳಿದಿರುವ ವ್ಯಾಪಾರ ಕಾಳಜಿಗಳ ಬಗ್ಗೆ ಚರ್ಚಿಸಲು ಚೀನಾ ಒಪ್ಪಿಗೆ ನೀಡಿದೆ.
ಸ್ಥಳೀಯ ಸಮಗ್ರ ಆರ್ಥಿಕ ಸಹಭಾಗಿತ್ವದಡಿ (ಆರ್ಸಿಇಪಿ) ಸಮತೋಲಿತ ಒಪ್ಪಂದವನ್ನು ಕೈಗೆತ್ತಿಕೊಳ್ಳುವುದಾಗಿ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಚೀನಾದ ಉಪಾಧ್ಯಕ್ಷ ಹು ಚುನ್ಹಾ ಅವರಿದ್ದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸ್ಥಳೀಯ ಸಮಗ್ರ ಆರ್ಥಿಕ ಸಹಭಾಗಿತ್ವದಡಿ ವಿಶ್ವದ ಅತಿದೊಡ್ಡ ಮುಕ್ತ ವಹಿವಾಟು ಪ್ರದೇಶದಲ್ಲಿನ (ಫ್ರೀ ಟ್ರೇಡ್ ಏರಿಯಾ: ಎಫ್ಟಿಎ) ಸೇವೆಗಳ ಮತ್ತು ಹೂಡಿಕೆಯ ದೃಷ್ಟಿಯಲ್ಲಿಟ್ಟುಕೊಂಡು ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯವೆಂದು ಮೋದಿ ಅವರು ಜಿನ್ಪಿಂಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಧ್ಯಕ್ಷ ಕ್ಸಿ ಇದನ್ನು ಗಮನಿಸಿ, 'ಚೀನಾ- ಭಾರತವು ಈ ಬಗ್ಗೆ ಇನ್ನಷ್ಟು ಚರ್ಚಿಸಲು ಸಿದ್ಧವಾಗಿವೆ. ಭಾರತದ ಕಾಳಜಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು' ಎಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉತ್ಪಾದನಾ ಸಹಭಾಗಿತ್ವದ ಕ್ಷೇತ್ರಗಳನ್ನು ಗುರುತಿಸಲು ಮೋದಿ ಮತ್ತು ಕ್ಸಿ ಒಪ್ಪಿಕೊಂಡಿದ್ದಾರೆ. ಭಾರತ ಮತ್ತು ಚೀನಾ ಹೂಡಿಕೆ ಹರಿವಿನ ಕ್ಷೇತ್ರಗಳನ್ನು ಪತ್ತೆ ಮಾಡಿ ಉಭಯ ರಾಷ್ಟ್ರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಮಾರುಕಟ್ಟೆ ವಿಸ್ತರಣೆಯ ಅನುಕೂಲತೆಗಳ ಬಗ್ಗೆ ಮೋದಿ ಸಲಹೆ ನೀಡಿದ್ದಾರೆ ಎಂದರು.