ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಎರಡನೇ ಅವಧಿಯ 2020-21ನೇ ಸಾಲಿನ ಬಜೆಟ್ 2020ರ ಫೆಬ್ರವರಿ 1ರಂದು ಮಂಡನೆ ಆಗಲಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಹಣಕಾಸು ಖಾತೆಯ ಜವಾಬ್ದಾರಿ ವಹಿಸಿಕೊಂಡ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇಯ ಬಜೆಟ್ ಮಂಡಿಸಲಿದ್ದಾರೆ. ಜನವರಿ 31ರಂದು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಆಗಲಿದೆ. ಇದರ ಮರುದಿನವೇ 2020-21 ಆಯವ್ಯಯ ಮಂಡನೆ ಆಗುವ ಸಾಧ್ಯತೆ ಇದೆ.
2019ರ ಆರ್ಥಿಕ ಸಮೀಕ್ಷೆಯನ್ನು ಮಧ್ಯಂತರ ಬಜೆಟ್ ಮಂಡನೆಯು ಜುಲೈ 5ರ ಹಿಂದಿನ ದಿನ ಅಂದರೆ ಜುಲೈ 4ರಂದು ಬಿಡುಗಡೆ ಮಾಡಲಾಯಿತು. 2030 ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಮುಟ್ಟುವ ಯೋಜನೆಯನ್ನು ಪ್ರಧಾನಿ ಮೋದಿ ಸರ್ಕಾರ ಇರಿಸಿಕೊಂಡಿತ್ತು. ಉದ್ದೇಶಿತ ಗುರಿ ತಲುಪಲು ಭಾರತವು ವಾರ್ಷಿಕ ಶೇ 7-8ರಷ್ಟು ಜಿಡಿಪಿ ಬೆಳವಣಿಗೆಯ ದರ ಕಾಪಾಡಿಕೊಳ್ಳಬೇಕಿದೆ.
ಫೆಬ್ರವರಿ 1 ರಜಾ ದಿನವಾದ ಶನಿವಾರ ಬಂದಿದ್ದು, ಫೆಬ್ರವರಿ ಮೊದಲ ದಿನದಂದು ಬಜೆಟ್ ಮಂಡಿಸುವ ಸಂಪ್ರದಾಯವನ್ನು ಸರ್ಕಾರ ಮುಂದುವರಿಸುತ್ತದೆಯೇ ಅಥವಾ ಏನಾದರೂ ಬದಲಾವಣೆಗಳಾಗುತ್ತದೆಯೇ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಪ್ರಶ್ನಿಸಿದಾಗ, "ಸಂಪ್ರದಾಯವು ಈ ಹಿಂದಿನಂತೆ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದರು.