ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಸಕ್ತ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ 4,189 ಕೋಟಿ ರೂ. ಆದಾಯ ಗಳಿಸಿದೆ ಎಂದು ವರದಿ ಮಾಡಿದೆ.
ಮೊದಲನೇ ತ್ರೈಮಾಸಿಕದಲ್ಲಿ ವಸೂಲಾಗದ ಸಾಲದ ಪ್ರಮಾಣದಲ್ಲಿ ಇಳಿಕೆ ಸಹ ಕಂಡುಬಂದಿದೆ. ಕಳೆದ ಹಣಕಾಸು ವರ್ಷದ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಎಸ್ಬಿಐ, 2,312.02 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
2020-21ರ ಪ್ರಥಮ ತ್ರೈಮಾಸಿಕದಲ್ಲಿ ಎಸ್‌ಬಿಐನ ಏಕೀಕೃತ ಒಟ್ಟು ಆದಾಯ 74,457.86 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 70,653.23 ಕೋಟಿ ರೂ.ಯಷ್ಟಿತ್ತು ಎಂದು ಪ್ರಸಕ್ತ ಹಣಕಾಸು ವರದಿಯನ್ನು ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.
ಅನುತ್ಪಾದಕ ಆಸ್ತಿಯ ಪ್ರಮಾಣದಲ್ಲಿ (ಎನ್ಪಿಎ) ಗಣನೀಯವಾಗಿ ಇಳಿಕೆ ಕಂಡುಬಂದಿದೆ. ಜೂನ್ ಅಂತ್ಯದ ವೇಳೆಗೆ ಶೇ 5.44ಕ್ಕೆ ತಲುಪಿದೆ. ಕಳೆದ ವರ್ಷದ ಜೂನ್ ಅಂತ್ಯದ ಅವಧಿಗೆ ಇದು ಶೇ 7.53ರಷ್ಟಿತ್ತು. ನಿವ್ವಳ ಎನ್ಪಿಎ ಸಹ ಶೇ 1.8ರಷ್ಟಕ್ಕೆ ತಲುಪಿದೆ. ಈ ಹಿಂದಿನ ವರ್ಷದಲ್ಲಿ ಇದು ಶೇ 3.07ರಷ್ಟಿತ್ತು.
ಏಕೀಕೃತ ಆಧಾರದ ಮೇಲೆ ಎಸ್‌ಬಿಐನ ನಿವ್ವಳ ಲಾಭವು ಶೇ 62ರಷ್ಟು ಏರಿಕೆಯಾಗಿ 4,776.50 ಕೋಟಿ ರೂ.ಗೆ ತಲುಪಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 2,950.50 ಕೋಟಿ ರೂ.ಯಷ್ಟಿತ್ತು. ಒಟ್ಟು ಆದಾಯವು 87,984.33 ಕೋಟಿ ರೂ. ಏರಿಕೆಯಾಗಿದ್ದು, ಈ ಹಿಂದಿನ ಹಣಕಾಸು ಮೊದಲ ತ್ರೈಮಾಸಿಕದಲ್ಲಿ 83,274.04 ಕೋಟಿ ರೂ.ಯಷ್ಟಿತ್ತು.