ನವದೆಹಲಿ: ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, (ಎಸ್‌ಬಿಐ) ತನ್ನ ಗ್ರಾಹಕರ ಖಾತೆಗಳಲ್ಲಿನ ಕನಿಷ್ಠ ಬಾಕಿ (ಮಿನಿಮಮ್ ಬ್ಯಾಲೆನ್ಸ್) ಉಳಿಸಿಕೊಳ್ಳದವರಿಗೆ ವಿಧಿಸುತ್ತಿದ್ದ ದಂಡದ ದರವನ್ನು ಪರಿಷ್ಕರಿಸಲಿದೆ.
ಎಸ್‌ಬಿಐ ಶೀಘ್ರದಲ್ಲೇ ತನ್ನ ಸೇವಾ ಶುಲ್ಕ ದರ ಪರಿಷ್ಕರಿಸುತ್ತಿದ್ದು, ಕೆಲವು ಸೇವೆಗಳಿಗೆ ಪ್ರಸ್ತುತ ಶುಲ್ಕ ದರವನ್ನು ಯಥಾವತ್ತಾಗಿ ಮುಂದುವರಿಸಲಿದೆ. ಮತ್ತೆ ಕೆಲವು ಸೇವೆಗಳ ಮೇಲಿನ ಶುಲ್ಕವನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ಮುಖ್ಯವಾಗಿ, ಸರಾಸರಿ ಮಾಸಿಕ ಬ್ಯಾಲೆನ್ಸ್ (ಎಎಂಬಿ) ನಿರ್ವಹಿಸದಿದಕ್ಕಾಗಿ ವಿಧಿಸಲಾಗುವ ಶುಲ್ಕದಲ್ಲಿ ಶೇ 80 ಪ್ರತಿಶತದಷ್ಟು ಕಡಿತಗೊಳಿಸಲಾಗುವುದು ಎಂದು ಹೇಳಿದೆ.
ಡಿಜಿಟಲ್ ಹಣ ವರ್ಗಾವಣೆಯ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ಮೂಲಕ ವಹಿವಾಟು ನಡೆಸುವುದು ಲಾಭದಾಯಕವಾಗಿದ್ದರೂ, ಶಾಖೆಗಳಲ್ಲಿ ಹಣವನ್ನು ಹಿಂಪಡೆಯುವ ಶುಲ್ಕವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಲಾಗಿದೆ. ಪರಿಷ್ಕೃತ ನೂತನ ಸೇವಾ ದರಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.
ಪ್ರಸ್ತುತ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿನ ಎಸ್‌ಬಿಐ ಶಾಖೆಗಳ ಗ್ರಾಹಕರ ಮಾಸಿಕ ಸರಾಸರಿ ಬ್ಯಾಲೆನ್ಸ್ ಅನ್ನು ಕ್ರಮವಾಗಿ ₹ 5,000 ಹಾಗೂ ₹ 3,000 ನಿಗದಿಪಡಿಸಲಾಗಿದೆ. ನಿಗದಿತ 'ಎಎಂಬಿ'ನಲ್ಲಿ ಶೇ 75ಕ್ಕಿಂತ ಅಧಿಕ ಹಣ ಉಳಿಸಿಕೊಳ್ಳದ ದಂಡ ಶುಲ್ಕ ಮೊತ್ತವನ್ನು ₹ 80 ರಿಂದ ₹ 15ಕ್ಕೆ ತಗ್ಗಿಸಲಾಗಿದೆ.