ಮುಂಬೈ: ಕಡಿಮೆ ದರದ ಡೇಟಾ ಹಾಗೂ ಉಚಿತ ಅನಿಯಮಿತ ಕರೆ ಮೂಲಕ ಟೆಲಿಕಾಂ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ್ದ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಈಗ ಆನ್ಲೈನ್ ಸುದ್ದಿ ಪ್ರಪಂಚಕ್ಕೆ ಲಗ್ಗೆ ಇಟ್ಟಿದೆ.
2019ರ ಸಾರ್ವತ್ರಿಕ ಲೋಕಸಭೆ ಚುನಾವಣೆ, ಐಪಿಎಲ್ ಹಾಗೂ ಕ್ರಿಕೆಟ್ ವಿಶ್ವಕಪ್ ಮುಂದಿಟ್ಟುಕೊಂಡು ಯೋಜಿತ ಮಾರ್ಗದಲ್ಲಿ ಲಾಂಚ್ ಆಗುತ್ತಿದೆ. ಭಾರತ ಸೇರಿದಂತೆ ವಿಶ್ವದಲ್ಲಿನ ಇತ್ತೀಚಿನ ಸುದ್ದಿ, ಬ್ರೇಕಿಂಗ್, ಲೈವ್ ಟಿವಿ, ವಿಡಿಯೋ, ನಿಯತಕಾಲಿಕೆ, ಪತ್ರಿಕೆಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುತ್ತಿದೆ.
ಜಿಯೋ ಸುದ್ದಿ ದೇಶದ 12ಕ್ಕೂ ಅಧಿಕ ಭಾಷೆಗಳಲ್ಲಿ ಬರಲಿದ್ದು, ಪ್ರಾದೇಶಿಕ ಹಾಗೂ ಸ್ಥಳೀಯ ಓದುಗರಿಗೆ ತಮ್ಮದೇ ಆದ ಭಾಷೆಗಳಲ್ಲಿ ಸುದ್ದಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈ ಆ್ಯಪ್ ಮೂಲಕ ಭಾರತ ಮತ್ತು ವಿಶ್ವದಾದ್ಯಂತ ಚಾಲ್ತಿಯಲ್ಲಿರುವ 150+ ಸುದ್ದಿ ವಾಹಿನಿಗಳು, 800+ ಮಾಸಿಕ ಪತ್ರಿಕೆ, 250+ ಸುದ್ದಿ ಪತ್ರಿಕೆ, ಪ್ರಸಿದ್ಧ ಬ್ಲಾಗ್ ಮತ್ತು ಸುದ್ದಿ ವೆಬ್ಸೈಟ್ಗಳಿಗೆ ಭೇಟಿ ನೀಡಬಹುದು.
ಜಿಯೋ ಎಕ್ಸ್‌ಪ್ರೆಸ್ ನ್ಯೂಸ್, ಜಿಯೋ ಮ್ಯಾಗಜಿನ್ ಮತ್ತು ಜಿಯೋ ನ್ಯೂಸ್ ಪೇಪರ್ಸ್ ಆ್ಯಪ್‌ಗಳನ್ನು ಒಳಗೊಂಡ ಸೇವೆ ಇದಾಗಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ ಲೈವ್ ಟಿವಿ ಮತ್ತು ವಿಡಿಯೋ ಸಹ ದೊರೆಯಲಿದೆ. ಈಗಾಗಲೇ ಈ ಮೂರು ಆ್ಯಪ್‌ಗಳನ್ನು ಬಳಸುತ್ತಿರುವವರು ಜಿಯೋ ನ್ಯೂಸ್ ಆ್ಯಪ್‌ಗೆ ಸೇರ್ಪಡೆಯಾಗಲಿದ್ದಾರೆ.