ನವದೆಹಲಿ: ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆಯ ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ ಅವರಿಗೆ ಸೂಚಿಸಿದ್ದಾರೆ.
ಇಂಧನ ಪೂರೈಕೆಯ ಅಭಾವ, ವಿಮಾನ ಬಾಡಿಗೆ ಪಾವತಿ ವಿಳಂಬ, ಪೈಲೆಟ್ಗಳ ವೇತನ ಬಾಕಿ ಸೇರಿದಂತೆ ಹಲವು ತೊಡಕುಗಳಿಂದ ಗುರುವಾರದ ಮಟ್ಟಿಗೆ ಅಂತಾರಾಷ್ಟ್ರೀಯ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಕಾರ್ಯಾಚರಣೆ ಕಾರಣಗಳಿಂದ ಕೊಲ್ಕತ್ತಾ- ಗುವಾಹತಿ ಹಾಗೂ ಕೊಲ್ಕತ್ತಾ- ಮುಂಬೈ ನಡುವಿನ ವಿಮಾನಗಳ ಸೇವೆಯನ್ನು ರದ್ದು ಪಡಿಸಿತ್ತು.
ಪ್ರಸ್ತುತ ಜೆಟ್ ಏರ್ವೇಸ್ ಸಂಸ್ಥೆಯಲ್ಲಿ 14 ಅಂತಾರಾಷ್ಟ್ರೀಯ ಸೇವೆಯ ವಿಮಾನಗಳಿದ್ದು, ಯಾವುದೇ ವಿಮಾನ ಸಂಸ್ಥೆ ಅಂತಾರಾಷ್ಟ್ರೀಯ ಸೇವೆ ಒದಗಿಸಲು ಕನಿಷ್ಠ 20 ವಿಮಾನಗಳು ಹೊಂದಿರುವುದು ಅತ್ಯಗತ್ಯವಾಗಿದೆ.
ಜೆಟ್ ಏರ್ವೇಸ್ ಸಂಸ್ಥೆ ₹ 8 ಸಾವಿರ ಕೋಟಿ ಸಾಲದ ಶೂಲಕ್ಕೆ ಸಿಲುಕಿದೆ. ಸಂಸ್ಥೆ ಚೇತರಿಸಿಕೊಳ್ಳಲು ₹ 1,500 ಕೋಟಿ ಹೂಡಿಕೆ ಮಾಡಲು ಜೆಟ್ ಏರ್ವೇಸ್ ಮಂಡಳಿ ಒಪ್ಪಿಗೆ ನೀಡಿತ್ತು. ಸಂಸ್ಥೆಯಲ್ಲಿನ ಪಾಲು ಬಂಡವಾಳ ಮಾರಾಟ ಮಾಡಲು ಎಸ್ಬಿಐ ನೇತೃತ್ವದಲ್ಲಿನ ಬ್ಯಾಂಕ್ ಒಕ್ಕೂಟನ ನಿರ್ಧರಿಸಿದೆ. ಈಗಾಗಲೇ ಬಿಡ್ಗಳ ಆಹ್ವಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ.