ನವದೆಹಲಿ: ಕೋವಿಡ್-19 ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ನ್ಯಾಟ್ಕೊ ಫಾರ್ಮಾ ತನ್ನ ಮೊಲ್ನುಪಿರಾವೀರ್ ಮಾತ್ರೆಗಳ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ನಿಂದ (ಸಿಡಿಎಸ್ಸಿಒ) ಅನುಮೋದನೆ ಕೋರಿದ್ದು, ಗ್ರೀನ್ ಸಿಗ್ನಲ್ಗಾಗಿ ಎದುರು ನೋಡುತ್ತಿದೆ.
ಸಿಡಿಎಸ್ಸಿಒ ಔಷಧಿಗಳ ಅನುಮೋದನೆ, ಕ್ಲಿನಿಕಲ್ ಪ್ರಯೋಗ, ಔಷಧಿಗಳ ಮಾನದಂಡಗಳನ್ನು ನಿಗದಿಪಡಿಸುತ್ತದೆ. ದೇಶದಲ್ಲಿ ಆಮದು ಮಾಡಿಕೊಳ್ಳುವ ಔಷಧಿಗಳ ಗುಣಮಟ್ಟವನ್ನು ನಿಯಂತ್ರಿಸುವುದು ಮತ್ತು ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳ ಚಟುವಟಿಕೆಗಳ ಸಮನ್ವಯದ ಜವಾಬ್ದಾರಿ ಹೊಂದಿದೆ.
ಸೋಮವಾರವಷ್ಟೇ ತುರ್ತು ಬಳಕೆಗೆ ಅನುಮತಿ ನೀಡುವಂತೆ ನ್ಯಾಟ್ಕೊ ಫಾರ್ಮಾ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ಗೆ ಕೋರಿತ್ತು. ಇದುವರೆಗೆ ಎರಡು ಹಂತಗಳಲ್ಲಿ ನಡೆಸಿದ ಪೂರ್ವ ಕ್ಲಿನಿಕಲ್ ಪ್ರಯೋಗಗಳು ಉತ್ತಮ ಫಲಿತಾಂಶ ನೀಡಿವೆ ಎಂದು ಕಂಪನಿ ತಿಳಿಸಿದೆ.
ಮೊಲ್ನುಪಿರಾವೀರ್ ಚಿಕಿತ್ಸೆಯು ಐದು ದಿನಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ ಎಂದು ವರದಿ ಮಾಡಿದೆ. ಓರಲ್ ಆಗಿ ತೆಗೆದುಕೊಳ್ಳುವುದರಿಂದ ರೋಗಿಗಳಿಗೆ ಕಡಿಮೆ ತೊಂದರೆಗಳಿವೆ. ಪ್ರಸ್ತುತ ಎರಡನೇ ಹಂತದ ಫಲಿತಾಂಶಗಳ ಮೇಲೆ ಸಿಡಿಎಸ್ಸಿಒದಿಂದ ತುರ್ತು ಬಳಕೆಗಾಗಿ ತ್ವರಿತ ಅನುಮೋದನೆ ಪಡೆಯಲು ನ್ಯಾಟ್ಕೊ ಎದುರು ನೋಡುತ್ತಿದೆ.
ಒಂದು ವೇಳೆ ಅನುಮೋದನೆ ದೊರೆತರೆ, ಕಂಪನಿಯು ಒಂದು ತಿಂಗಳ ಅವಧಿಯಲ್ಲಿ ಔಷಧಿ ಬಿಡುಗಡೆ ಮಾಡುತ್ತದೆ. ಔಷಧದ ಪ್ರಾಯೋಗಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಸೋಮವಾರ ಬಿಎಸ್‌ಇಯಲ್ಲಿ ನಾಟ್‌ಕೊ ಫಾರ್ಮಾ ಷೇರುಗಳು ಶೇ 3.29ರಷ್ಟು ಏರಿಕೆ ಕಂಡು 906.70 ರೂ.ಗೆ ತಲುಪಿದೆ.