ಹುಬ್ಬಳ್ಳಿ: ''ನಮಗೂ ರಾಜಕಾರಣ ಮಾಡುವುದಕ್ಕೆ ಬರುತ್ತದೆ, ಇನ್ನುಮುಂದೆ ನಾವೂ ರಾಜಕಾರಣ ಮಾಡುತ್ತೇವೆ'' ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಮುಡಾ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪದೇ ಪದೆ ರಾಜಕಾರಣ ಮಾಡುತ್ತಿವೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ಮಾಡಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ನಿತ್ಯ ರಾಜಕಾರಣ ಮಾಡುವುದು ಸರಿಯಲ್ಲ. ಮುಡಾ ವಿಚಾರವನ್ನು ಪ್ರಧಾನಮಂತ್ರಿಗಳು ಅವರ ಚುನಾವಣಾ ಭಾಷಣದಲ್ಲಿ ಉಪಯೋಗಿಸಿಕೊಳ್ಳುತ್ತಾರೆ ಎಂದಾದರೆ ಅದು ರಾಜಕಾರಣ ಅಲ್ಲದೇ ಬೇರೇನು?. ಹಾಗಾಗಿ, ನಾವು ರಾಜಕಾರಣ ಮಾಡುತ್ತೇವೆ. ಪ್ರತ್ಯುತ್ತರ ನೀಡುತ್ತೇವೆ" ಎಂದು ಟಾಂಗ್ ನೀಡಿದರು.
ನಾನು ರಾಜೀನಾಮೆ ಕೊಡಲು ಸಿದ್ಧ, ಸಿಎಂ ರಾಜೀನಾಮೆ ಕೊಡುತ್ತಾರಾ ಅನ್ನುವ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಆರ್. ಅಶೋಕ್ ಮೊದಲು ರಾಜೀನಾಮೆ ಕೊಡಲಿ. ನಂತರ ಬೇಕಿದ್ದರೆ ಅದರ ಬಗ್ಗೆ ವಿಚಾರ ಮಾಡೋಣ" ಎಂದು ತಿರುಗೇಟು ನೀಡಿದರು.
ವೇಣುಗೋಪಾಲ್ ಭೇಟಿ ನನಗೆ ಗೊತ್ತಿಲ್ಲ: ಮುಂದುವರೆದು, "ಸಚಿವ ಜಾರಕಿಹೊಳಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜಾರಕಿಹೊಳಿ ಅವರ ಮಗಳು ಸಂಸದೆಯಾಗಿದ್ದಾಳೆ. ಮಗಳಿಗೆ ಕ್ವಾಟರ್ಸ್ಬೇಕು ಅನ್ನುವ ಕಾರಣಕ್ಕೆ ದೆಹಲಿಗೆ ಭೇಟಿ ನೀಡಿದ್ದರು. ಅಲ್ಲದೇ, ಜಮ್ಮು ಕಾಶ್ಮೀರ ಚುನಾವಣಾ ರ‍್ಯಾಲಿಯಲ್ಲಿ ಖರ್ಗೆ ಅವರು ಕುಸಿದು ಬಿದ್ದಿದ್ದರಿಂದ ಅವರನ್ನು ನೊಡುವ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು. ಅದು ಬಿಟ್ಟು ರಾಜ್ಯಕ್ಕೆ ಕೆ.ಸಿ.ವೇಣುಗೋಪಾಲ್ ಭೇಟಿ ನೀಡುವ ಬಗ್ಗೆ ನನಗೆ ಗೊತ್ತಿಲ್ಲ" ಎಂದರು.
"ಜಾತಿಗಣತಿ ಜಾರಿ ವಿಚಾರವನ್ನು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುತ್ತೇವೆ. ಸಿಎಂ ಅವರು ಕೂಡ ಕ್ಯಾಬಿನೆಟ್ಗೆ ತಂದು ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಕ್ಯಾಬಿನೆಟ್ಗೆ ಬಂದ ಮೇಲೆ ಏನು ತೀರ್ಮಾನ ಆಗುತ್ತದೆಯೋ ನೋಡೋಣ. ಸಂಪೂರ್ಣ ಚರ್ಚೆ ಬಳಿಕ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ" ಎಂದು ತಿಳಿಸಿದರು.
ಪಾಕ್ ಪ್ರಜೆಗಳ ಬಂಧನ ವಿಚಾರ: ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದವರು ನೆಲೆಯೂರಿರುವ ವಿಚಾರಕ್ಕೆ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, "ಕೇಂದ್ರ ಸರ್ಕಾರದ ಬಳಿ ಸಿಬಿಐ ಇದೆ. ಸೆಂಟ್ರಲ್ ಏಜೆನ್ಸಿಯವರು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಪಾಕಿಸ್ತಾನದಿಂದ ಇವರು ಬೆಂಗಳೂರಿಗೆ ಹೇಗೆ ಬಂದರು. ಇಲ್ಲಿಗೆ ಬಂದು ಪಾಸ್‌ಪೋರ್ಟ್ ಮಾಡಿಕೊಳ್ಳುವರೆಗೆ ಹೋಗಿದ್ದಾರೆ. ಅಂದರೆ ಇದರಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ ವಿಫಲ ಆಗಿದೆ. ನಮ್ಮ ಇಲಾಖೆಯ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಕರ್ನಾಟಕ ಪೊಲೀಸ್ ದಿಟ್ಟ ಹೆಜ್ಜೆ ಇಟ್ಟಿದೆ. ಇನ್ನೂ ಹಲವರಿರುವ ಮಾಹಿತಿ ಇದೆ, ಹುಡುಕುತ್ತೇವೆ" ಎಂದು ತಿಳಿಸಿದರು.
ನುಸುಳುವಿಕೆಗೆ ಕಡಿವಾಣ ಹಾಕಿರುವುದೇ ಬಿಜೆಪಿ ಸರ್ಕಾರ- ಪ್ರಹ್ಲಾದ್ ಜೋಶಿ ತಿರುಗೇಟು: ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರದ ಏಜೆನ್ಸಿಗಳ ವೈಫಲ್ಯ ಕಾರಣ ಎಂಬ ಜಿ.ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ಇದೊಂದು ಬೇಜವಾಬ್ದಾರಿಯಿಂದ ಹೇಳಿಕೆಯಾಗಿದೆ. ಒಬ್ಬ ಗೃಹ ಸಚಿವರಾಗಿದ್ದವರು ಈ ರೀತಿ ಹೇಳುವುದು ಸರಿಯಲ್ಲ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೊರರು ಭಾರತಕ್ಕೆ ಬಂದಿದ್ದರು. ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ. ಎಲ್ಲಲ್ಲಿ ಬಾಂಬ್ ಬ್ಲಾಸ್ಟ್‌ಗಳಾಗಿದೆ ಎಂಬುದನ್ನು ತಿಳಿದು ಮಾತನಾಡಲಿ" ಎಂದು ತಿರುಗೇಟು ನೀಡಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದರಾಬಾದ್, ಮುಂಬೈ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಬಾಂಬ್ ಬ್ಲಾಸ್ಟ್‌ಗಳಾಗಿವೆ. ಅದನ್ನೆಲ್ಲವನ್ನು ನೆನಪು ಮಾಡಿಕೊಳ್ಳಿ, ಬಾಂಬ್ ಬ್ಲಾಸ್ಟ್ ಆಗಲಿಕ್ಕೆ ಕಾರಣ ನುಸುಳುಕೋರರು. ಬಿಜೆಪಿ ಸರ್ಕಾರ ಬಂದ ಮೇಲೆ ಇವಕ್ಕೆಲ್ಲ ಕಡಿವಾಣ ಬಿದ್ದಿದೆ. ಈ ವಿಷಯದಲ್ಲಿ ನಾವು ರಾಜಕಾರಣ ಮಾಡಿಲ್ಲ. ಜಿ.ಪರಮೇಶ್ವರ್ ಅವರನ್ನು ನಾವು ಸಜ್ಜನ, ದೇಶ ಮತ್ತು ರಾಜ್ಯದ ಬಗ್ಗೆ ಕಳಕಳಿ ಇರುವವರು ಎಂದು ತಿಳಿದುಕೊಂಡಿದ್ದೇವೆ" ಎಂದರು.
ಇದನ್ನೂ ಓದಿ: ರಾಜೀನಾಮೆ ಕೊಡದೆ ಸಿದ್ದರಾಮಯ್ಯ ಭಂಡತನ ಪ್ರದರ್ಶನ: ಜಗದೀಶ ಶೆಟ್ಟರ್ - Jagadish Shettar