ಶಿವಮೊಗ್ಗ: ಚಲನಚಿತ್ರೋತ್ಸವಗಳು ಕಾಟಾಚಾರಕ್ಕಾಗಿ ನಡೆಯದೇ, ಜನತೆಗೆ ತಲುಪುವಂತೆ ಆಗಬೇಕು ಎಂದು ವಿಧಾನಪರಿಷತ್ ಸದಸ್ಯೆ, ನಟಿ ಉಮಾಶ್ರೀ ಹೇಳಿದ್ದಾರೆ. ಶುಕ್ರವಾರ ಸಂಜೆ ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳ್ಳಿ ಮಂಡಲ, ಚಿತ್ರ ಸಮಾಜ ಸಂಯುಕ್ತಾಶ್ರಯದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ದಸರಾ ನಡೆಯುತ್ತಿರುವುದು ಅತ್ಯಂತ ಸ್ವಾಗತಾರ್ಹ. ಇದು ಹೆಮ್ಮೆಯ ಜಿಲ್ಲೆ. ಸಂಸ್ಕಾರಕ್ಕೆ ಹೆಸರಾಗಿದೆ. ಕಲೆ, ಹೋರಾಟ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣಕ್ಕೆ ಹೆಸರು ಮಾಡಿದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಪ್ರಸಿದ್ಧವಾಗಿದೆ. ಇದರ ಅಂಗವಾಗಿ ಶಿವಮೊಗ್ಗದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಅದರಲ್ಲಿ ದಸರಾ ಚಲನಚಿತ್ರೋತ್ಸವ ಕೂಡಾ ಒಂದು. ಆದರೆ ಈ ಚಲನಚಿತ್ರೋತ್ಸವ ಕಾಟಾಚಾರಕ್ಕಾಗಿ ನಡೆಯದೇ ಅರ್ಥಗರ್ಭಿತವಾಗಿ, ಸಾರ್ವಜನಿಕರು ಒಳ್ಳೆಯ ಸಿನಿಮಾಗಳನ್ನು ನೋಡುವಂತಾಗಬೇಕೆಂದು ಹೇಳಿದ್ದಾರೆ.
ಇಂದು ಸಿನಿರಂಗ ಪ್ರಗತಿಯತ್ತ ಸಾಗುತ್ತಿದೆ. ಒಳ್ಳೆಯ ಸಿನಿಮಾಗಳನ್ನು ನೋಡುತ್ತಾರೆ. ಮನೆಯಿಂದ ಜನರನ್ನು ಹೊರಗೆ ಕರೆದುಕೊಂಡು ಬರುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಅದರಲ್ಲೂ ಕನ್ನಡದ ಸಿನಿಮಾಗಳು ಉಳಿಯಬೇಕು. ಇದರಿಂದ ಕಲಾವಿದರೂ ಕೂಡ ಉಳಿಯುತ್ತಾರೆ. ಇಂತಹ ವಾತಾವರಣ ನಿರ್ಮಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದರು.
ಚಲನಚಿತ್ರ ವೀಕ್ಷಣೆ ಸಮಯ ಬದಲಾಯಿಸಿ: ದಸರಾದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಪ್ರದರ್ಶನ ಏರ್ಪಡಿಸಿರುವುದಕ್ಕೆ ತಮ್ಮ ಭಾಷಣದಲ್ಲಿ ಅಸಮಾಧಾನ ಹೊರ ಹಾಕಿದರು. ಇಷ್ಟು ಬೆಳಗ್ಗೆ ಸಿನಿಮಾ ವೀಕ್ಷಿಸಲು ಯಾರೂ ಬರೋದಿಲ್ಲ. ಹಾಗಾಗಿ, ಸಮಯ ಬದಲಾಯಿಸುವಂತೆ ಆಯೋಜಕರಲ್ಲಿ ವಿನಂತಿಸಿಕೊಂಡರು.
ನಾನು ಶಿವಮೊಗ್ಗದ ಸೊಸೆ: ಸಮಾರಂಭದಲ್ಲಿ ಮಾತನಾಡಿದ 'ಭೀಮ' ಚಿತ್ರದ ನಟಿ ಪ್ರಿಯಾ ಅವರು, ನನಗೆ ದಸರಾ ವಿಶೇಷವಾಗಿದೆ. ನನ್ನೂರು ಮೈಸೂರು, ನನ್ನ ಗಂಡನ ಮನೆ ಶಿವಮೊಗ್ಗ. ಮೈಸೂರಿನ ದಸರಾ ವಿಶ್ವ ವಿಖ್ಯಾತಿಯಾಗಿದೆ. ಅದೇ ರೀತಿ ಶಿವಮೊಗ್ಗ ದಸರಾ ಸಹ ತನ್ನದೇ ಅದ ವಿಶೇಷತೆಯನ್ನು ಹೊಂದಿದೆ ಎಂದು ತಿಳಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದವರು, ಒಂದು ಡೈಲಾಗ್ ಹೇಳಿ ಎಂದು ಹೇಳುತ್ತಿದ್ದಂತೆಯೇ 'ಭೀಮ' ಚಿತ್ರದ ಡೈಲಾಗ್ ಅನ್ನು ಇಲ್ಲಿ ಹೇಳೋದಕ್ಕೆ ಆಗಲ್ಲ. ಇಲ್ಲಿ ಎಲ್ಲರೂ ಇದ್ದಾರೆ ಎಂದ ನಟಿ ಒಂದು ಜಾನಪದ ಗೀತೆಯನ್ನು ಹಾಡಿ ರಂಜಿಸಿದರು. ಚಲನಚಿತ್ರೋವ್ಸದ ಪ್ರಯುಕ್ತ ನಗರದ ನಾಲ್ಕು ಚಿತ್ರಮಂದಿರಗಳಲ್ಲಿ ಕನ್ನಡದ ವಿವಿಧ ನಟರ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿಕುಣಿತ ವೀಕ್ಷಿಸಿ ಖುಷಿಪಟ್ಟ ರಕ್ಷಿತಾ ಪ್ರೇಮ್ ದಂಪತಿ - Rakshita Prem Couple