ನವದೆಹಲಿ: ಭಾರತಕ್ಕೆ ಗಡಿಪಾರು ಆದೇಶ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯ ಅರ್ಜಿಯನ್ನು ಲಂಡನ್ನಲ್ಲಿನ ಇಂಗ್ಲೆಂಡ್ ಹೈಕೋರ್ಟ್ ತಿರಸ್ಕರಿಸಿತು. ಒಂದು ದಿನದ ನಂತರ ಜಾರಿ ನಿರ್ದೇಶನಾಲಯ (ಇಡಿ), 'ಕಿಂಗ್‌ಫಿಶರ್ ಏರ್ಲೈನ್ಸ್ನ ಮಾಜಿ ಅಧ್ಯಕ್ಷರನ್ನು ಶೀಘ್ರವೇ ವಶಕ್ಕೆ ಪಡೆಯುವ ಭರವಸೆ ಇದೆ' ಎಂದು ಹೇಳಿದೆ.
ತನಿಖೆಗೆ ಸಂಬಂಧಿಸಿರುವ ಹಿರಿಯ ಇಡಿ ಅಧಿಕಾರಿಯೊಬ್ಬರು ಮಾತನಾಡಿ, ಮಲ್ಯ ಅವರ ಮನವಿಯನ್ನು ಇಂಗ್ಲೆಂಡ್ ಹೈಕೋರ್ಟ್ ನಿನ್ನೆ ತಿರಸ್ಕರಿಸಿದೆ. ಈಗ ಅವರು ಅಲ್ಲಿನ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದರು.
ಇಂಗ್ಲೆಂಡ್ ವ್ಯವಸ್ಥೆಯು ಸ್ವಲ್ಪ ವಿಭಿನ್ನವಾಗಿದೆ. ಮಲ್ಯ ಅವರು ಮತ್ತೆ ಹೈಕೋರ್ಟ್ ಮೂಲಕ ಅಲ್ಲಿನ ಉನ್ನತ ನ್ಯಾಯಾಲಯದ ಕದ ತಟ್ಟಬೇಕಿದೆ. ಸುಪ್ರೀಂಕೋರ್ಟ್ಗೆ ಏಕೆ ಸಂಪರ್ಕಿಸಬೇಕು? ಅವಶ್ಯಕತೆ ಏನಿದೆ ಎಂಬುದನ್ನು ಮಲ್ಯ ಅವರು ಹೈಕೋರ್ಟ್ಗೆ ಮನವರಿಕೆ ಮಾಡಬೇಕಾಗಿದೆ ಎಂದು ಅಧಿಕಾರಿ ಹೇಳಿದರು.
ಯಾವುದೇ ಸಮಯದಲ್ಲಿ ತಾನು ಇಂಗ್ಲೆಂಡ್‍ನಿಂದ ಭಾರತಕ್ಕೆ ಗಡಿಪಾರು ಆಗುವ ಭೀತಿಯಿಂದಾಗಿ ಹೊಸ ಕಾನೂನು ಸಮರಕ್ಕೆ ಮದ್ಯದ ದೊರೆ ಮಲ್ಯ ಸಜ್ಜಾಗುತ್ತಿದ್ದಾರೆ. ಭಾರತಕ್ಕೆ ಹಸ್ತಾಂತರ ಮಾಡುವುದನ್ನು ಪ್ರಶ್ನಿಸಿ 2018ರಲ್ಲಿ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.