ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ (ಏಐ) ಕಳೆದ ಹಣಕಾಸು ವರ್ಷದಲ್ಲಿ ಸುಮಾರು ₹ 4,600 ಕೋಟಿಯಷ್ಟು ನಷ್ಟ ಅನುಭವಿಸಿದೆ ಎಂದು ಹಿರಿಯ ಅಧಿಕಾರಿವೋರ್ವರು ತಿಳಿಸಿದ್ದಾರೆ.
ಹೆಚ್ಚಿದ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ನಷ್ಟದಿಂದಾಗಿ ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 4,600 ಕೋಟಿ ರೂ. ನಿರ್ವಹಣೆಯ ನಷ್ಟ ದಾಖಲಿಸಿದೆ. ಆದರೆ, 2019-20 ಅವಧಿಯಲ್ಲಿನ ವಿಮಾನಗಳ ಕಾರ್ಯಾಚರಣೆಯಲ್ಲಿ ಸಾಲದ ಋಣಭಾರದ ಹೊರೆ ತಗ್ಗಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಕಠಿಣ ವ್ಯವಹಾರ ಪರಿಸ್ಥಿತಿಗಳಿಂದಾಗಿ ಏರ್ ಇಂಡಿಯಾದ ನಿವ್ವಳ ನಷ್ಟ ಸುಮಾರು 8,400 ಕೋಟಿ ರೂ. ಆಗಿದ್ದು, 2018-19ರಲ್ಲಿ ಒಟ್ಟು ಆದಾಯವು ಸುಮಾರು 26,400 ಕೋಟಿ ರೂ.ತಲುಪಿದೆ ಎಂದರು.
ಒಂದು ವೇಳೆ ತೈಲ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬರದಿದ್ದರೆ ಹಾಗೂ ವಿದೇಶಿ ವಿನಿಮಯ ದರಗಳಲ್ಲಿ ಏರಿಳಿತ ಆಗಿರದಿದ್ದರೆ 2019-20ರಲ್ಲಿ ವಿಮಾನಯಾನವು 700 ರಿಂದ 800 ಕೋಟಿ ರೂ. ಲಾಭವನ್ನು ಗಳಿಸುವ ನಿರೀಕ್ಷೆಯಿದೆ ಎಂದು ಮತ್ತೋರ್ವ ಅಧಿಕಾರಿ ಅಂದಾಜಿಸಿದ್ದಾರೆ.
ಜೂನ್ಗೆ ಅಂತ್ಯದ ಬಳಿಕ 3 ತಿಂಗಳಲ್ಲಿ ವಿಮಾನಯಾನವು 175 ರಿಂದ 200 ಕೋಟಿ ರೂ. ಕಾರ್ಯಾಚರಣೆಯ ನಷ್ಟ ಅನುಭವಿಸಿದೆ. ಭಾರತೀಯ ವಿಮಾನಗಳ ಹಾರಾಟಕ್ಕೆ ಪಾಕ್ ತನ್ನ ವಾಯು ಗಡಿ ಪ್ರವೇಶದ ನಿಷೇಧ ಹೇರಿದ್ದು ಇದಕ್ಕೆ ಮುಖ್ಯ ಕಾರಣವೆಂದು ಹೇಳಲಾಗ್ತಿದೆ.