ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹರಗಾಪುರ ಬಳಿ ಹೈವೇಯಲ್ಲಿ ನ.15ರಂದು ಇಬ್ಬರು ದುಷ್ಕರ್ಮಿಗಳು ತಮ್ಮ ಕಾರು ಅಡ್ಡಗಟ್ಟಿ, ಗನ್ ತೋರಿಸಿ 75 ಲಕ್ಷ ರೂ. ದೋಚಿದ್ದಾರೆ ಎಂದು ಸಂಕೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ದೂರುದಾರ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಈ ಸಂಬಂಧ ಸೋಮವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ಹರಗಾಪುರ ಬಳಿ ಅಡ್ಡಗಟ್ಟಿ 75 ಲಕ್ಷ ರೂ. ದರೋಡೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಸೂರಜ್ ಹೊನಮಾನೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ನೇರ್ಲಿ ಬಳಿ ಕಾರು ಪತ್ತೆಯಾಗಿತ್ತು. ಇನ್ನು 75 ಲಕ್ಷ ರೂ. ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ, ಕಾರಿನಲ್ಲಿ ಸಿಕ್ಕಿದ್ದು 1.01 ಕೋಟಿ ರೂ. ಹಣ. ಈ ಸಂಬಂಧ ದೂರು ನೀಡಿದ ಸೂರಜ್ ಅವರನ್ನು ಕೇಳಿದಾಗ, ವ್ಯಾಪಾರಿಯೊಬ್ಬರು ಕೊಟ್ಟಿದ್ದ ಹಣವನ್ನು ಎಣಿಸದೆ ತೆಗೆದುಕೊಂಡು ಬರುತ್ತಿದ್ದೆವು. ಹಾಗಾಗಿ, 75 ಲಕ್ಷ ರೂ. ಇರಬಹುದೆಂದು ಭಾವಿಸಿದ್ದೆವು ಎಂದು ಹೇಳಿಕೆ ಕೊಟ್ಟಿದ್ದರು. ಇದರಿಂದ ದೂರುದಾರರ ಮೇಲೆ ಸಂಶಯ ಬಂದಿತು. ಹಾಗಾಗಿ, ದೂರುದಾರ ಸೂರಜ್, ಕಾರು ಚಾಲಕ ಆರೀಫ್ ಶೇಖ್, ಅಜಯ ಸರಗಾರ ಸೇರಿ ಮೂವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ" ಎಂದು ಹೇಳಿದರು.
"ಕಾರಿನ ಮುಂದಿನ ಎರಡು ಸೀಟುಗಳ ಮಧ್ಯೆ ಇರುವ ಗೇರ್‌ಬಾಕ್ಸ್ ಮತ್ತು ಹ್ಯಾಂಡ್‌ಬ್ರೇಕ್ ಕೆಳಗಿನ ಮೂಲವಿನ್ಯಾಸ ಬದಲಿಸಿದ್ದ ಆರೋಪಿಗಳು ಅದರಲ್ಲಿ ಒಂದು ಹೊಸ ಬಾಕ್ಸ್ ತಯಾರಿಸಿ, ಅದರಲ್ಲೇ ಹಣ ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ, ಮೋಟಾರು ವಾಹನಗಳ ಕಾಯ್ದೆಯಡಿ ಕಾರಿನ ಮಾಲೀಕರ ವಿರುದ್ಧ ಸಹ ದೂರು ದಾಖಲಿಸಿದ್ದೇವೆ. ಅಲ್ಲದೇ 1 ಕೋಟಿಗೂ ಅಧಿಕ ಮೊತ್ತ ಪತ್ತೆಯಾದ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆಗೂ ಈ ಕುರಿತು ಮಾಹಿತಿ ನೀಡಲಾಗಿದೆ" ಎಂದು ತಿಳಿಸಿದರು.
"ಮಹಾರಾಷ್ಟ್ರದ ಸಾಂಗ್ಲಿಯ ಭರತ್ ಮಾರಗುಡೆ ಎಂಬ ವ್ಯಾಪಾರಿ ಕೇರಳದಲ್ಲಿ ಹಳೆ ಚಿನ್ನದ ಮಾರಾಟ ಮಾಡುತ್ತಾರೆ. ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಳೇ ಚಿನ್ನ ಕಳುಹಿಸಿ, ಇಲ್ಲಿಂದ ಕೇರಳಕ್ಕೆ ಹಣ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಆದ್ದರಿಂದ ಕೇರಳ, ಮಹಾರಾಷ್ಟ್ರ ಮತ್ತು ಸ್ಥಳೀಯವಾಗಿಯೂ ಮೂರು ತಂಡಗಳನ್ನು ರಚಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳುತ್ತಿದ್ದೇವೆ" ಎಂದು ಡಾ. ಭೀಮಾಶಂಕರ ಗುಳೇದ ವಿವರಿಸಿದರು.
ಇದನ್ನೂ ಓದಿ: ಮುಸುಕು ವೇಷ ಧರಿಸಿ ಪಿಸ್ತೂಲ್ ಇಟ್ಟುಕೊಂಡು ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರ ಬಂಧನ