ನವದೆಹಲಿ: ಭಾರತೀಯ ರೈಲ್ವೆಯ 167 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಳಿಗಳ ಮೇಲೆ ರೈಲುಗಳ ಓಡಾಟವಿಲ್ಲ, ಜೀವನ ಹೇಗಿರುತ್ತದೆ ಎಂಬುದರ ಒಂದು ನೋಟವನ್ನು 2020ರ ವರ್ಷ ತೋರಿಸಿದೆ.
ಕೊರೊನಾ ವೈರಸ್ ಪ್ರೇರೇಪಿತ ಲಾಕ್‌ಡೌನ್ ಅನ್ನು ಮಾರ್ಚ್ 24ರಂದು ಘೋಷಿಸಿದ ಬಳಿಕ, ರೈಲ್ವೆ ತನ್ನ 167 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ತನ್ನ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿತು (ಅಗತ್ಯ ವಸ್ತುಗಳ ಸರಕು ಸಾಗಣೆ ರೈಲುಗಳಿಗೆ ವಿನಾಯಿತಿ ಹೊರತುಪಡಿಸಿದಂತೆ ಬಹುತೇಕ ಸ್ತಬ್ಧ).
ದೇಶಾದ್ಯಂತ ನಗರ, ಪ್ರವಾಸಿ, ಧಾರ್ಮಿಕ ಕೇಂದ್ರಗಳಲ್ಲಿ ಸಿಕ್ಕಿಬಿದ್ದ ಜನರು ರೈಲುಗಳ ಸಂಚಾರವಿಲ್ಲದೇ ಪರಿತಪಿಸಿದರು. ತಮ್ಮ-ತಮ್ಮ ಮನೆಗೆ ತೆರಳಲು ಸಂಚಾರದ ಜೀವಸೆಲೆಯಾದ ರೈಲ್ವೆ ಸೇವೆ ಲಭ್ಯವಾಗದೇ ಲಕ್ಷ್ಯಾಂತರ ವಲಸೆ ಕಾರ್ಮಿಕರು ರಸ್ತೆಗಳು ಹಗಲು- ರಾತ್ರಿ ನಡೆದು ಸಾಗಿದರು.
ರೈಲ್ವೆ ತನ್ನ ಸಂಪನ್ಮೂಲಗಳನ್ನು ದೇಶಾದ್ಯಂತ ಅಗತ್ಯ ವಸ್ತುಗಳನ್ನು ಸಾಗಿಸುವಂತೆ ನಿರ್ದೇಶನ ಬರುತ್ತಿದ್ದಂತೆ, ಬೇಸಿಗೆ ರಜಾದಿನಗಳಲ್ಲಿ ಲಕ್ಷಾಂತರ ಟಿಕೆಟ್‌ಗಳನ್ನು ರದ್ದುಪಡಿಸಲಾಯಿತು. ಇದು ರೈಲ್ವೆ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸಂಗತಿಯಾಗಿದ್ದು, ಅತಿದೊಡ್ಡ ಪ್ರಮಾಣದಲ್ಲಿ ಟಿಕೆಟ್ ಮೊತ್ತವನ್ನು ಪ್ರಯಾಣಿಕರಿಗೆ ವಾಪಸ್ ನೀಡಬೇಕಾಯಿತು.
ಇದನ್ನೂ ಓದಿ: 4 ವರ್ಷಗಳಲ್ಲಿ 70 ಸಾವಿರ ಸೂಪರ್ ಕ್ಯಾರಿ ವಾಹನ ಮಾರಿದ ಮಾರುತಿ ಸುಜುಕಿ
ಮೇ 1ರಂದು ರೈಲುಗಳ ಚಕ್ರಗಳು ಮತ್ತೆ ನಿಧಾನಕ್ಕೆ ಚಲಿಸಲು ಪ್ರಾರಂಭಿಸಿದವು. ಈ ಸಮಯದಲ್ಲಿ ವಲಸೆ ಕಾರ್ಮಿಕರನ್ನು ಮನೆಗೆ ಕರೆದೊಯ್ಯಲಾಯಿತು. ಮೇ 1 ಮತ್ತು ಆಗಸ್ಟ್ 30ರ ನಡುವೆ ರೈಲ್ವೆಯು 23 ರಾಜ್ಯಗಳಲ್ಲಿ 4,000ಕ್ಕೂ ಅಧಿಕ ಶ್ರಮಿಕ್ ವಿಶೇಷ ರೈಲುಗಳು 63.15 ಲಕ್ಷ ಕಾರ್ಮಿಕರನ್ನು ಮನೆಗೆ ಕರೆದೊಯ್ಯಿತು. ಅಲ್ಲಲ್ಲಿ ಸಿಕ್ಕಿಬಿದ್ದ ವಲಸಿಗರಿಗೆ ಅತ್ಯನುಕೂಲವಾಯಿತು.
ಶ್ರಮಿಕ್ ವಿಶೇಷ ರೈಲುಗಳಿಗೆ ವಲಸೆ ಕಾರ್ಮಿಕರಿಂದ ಶುಲ್ಕ ವಿಧಿಸಲಾಗುತ್ತಿದೆ ಎಂದು ರೈಲ್ವೆ ವಿರುದ್ಧ ಪ್ರತಿಪಕ್ಷಗಳು ಟೀಕಿಸಿದವು. ರೈಲ್ವೆ ಕಾರ್ಮಿಕರಿಂದ ಒಂದು ಪೈಸೆಯನ್ನೂ ವಿಧಿಸುವುದಿಲ್ಲ ಮತ್ತು ಅವರ ಸಾರಿಗೆಗಾಗಿ 2,000 ಕೋಟಿ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಿದೆ ಎಂದು ರೈಲ್ವೆ ಸಚಿವರು ಹೇಳಿಕೆ ನೀಡಿದರು. ಇದು ಆಗ ಅತಿದೊಡ್ಡ ರಾಜಕೀಯ ವಿಷಯವಾಯಿತು.