ಹೈದರಾಬಾದ್: ಷೇರುಪೇಟೆಗಳು ಹೊಸ ಮಗ್ಗುಲಿಗೆ ಹೊರಳಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಹೂಡಿಕೆ ಮಾಡಲು ಸಾಕಷ್ಟು ಮಂದಿ ಮುಂದೆ ಬರುತ್ತಿದ್ದಾರೆ. ನೀವೂ ಕೂಡಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ನೀವು ಹೂಡಿಕೆ ಮಾಡಬೇಕಾದರೆ, ವಹಿವಾಟನ್ನು ನಡೆಸಲು ಡಿಮ್ಯಾಟ್ ಖಾತೆ ಅನಿವಾರ್ಯ.
ಈ ಹಿಂದೆ, ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳನ್ನು ತೆರೆಯುವುದು ಕಷ್ಟದ ಕೆಲಸವಾಗಿತ್ತು. ಆದ್ದರಿಂದ ಹೂಡಿಕೆ ಮಾಡೋಕೆ ಕೂಡಾ ಯಾರೂ ಮುಂದಾಗುತ್ತಿರಲಿಲ್ಲ. ಆದರೆ, ಈಗ ತಂತ್ರಜ್ಞಾನ ಬದಲಾಗಿದೆ. ನಿಮಗೆ ಡಿಮ್ಯಾಟ್ ಖಾತೆಯನ್ನು ತೆರೆಯಬೇಕು ಅನ್ನಿಸಿದರೆ, ಕೆಲವೇ ನಿಮಿಷಗಳಲ್ಲಿ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು. ಅಷ್ಟೇ ಅಲ್ಲದೇ ಈ ಮೊದಲು ಡಿಮ್ಯಾಟ್ ಖಾತೆಯಲ್ಲಿ ನಾಮಿನಿಯನ್ನು ಸೇರಿಸುವುದು ಸ್ವಲ್ಪ ಕಷ್ಟವಾಗಿತ್ತು. ಈಗ ಅತ್ಯಂತ ಸುಲಭವಾಗಿ ನಾಮಿನಿಯನ್ನು ಸೇರಿಸಬಹುದು. ಎಲ್ಲ ಟೆಕ್ನಾಲಜಿ ಮಹಿಮೆ..
ಅಂದಹಾಗೆ ನಾವು ಡಿಮ್ಯಾಟ್ ಖಾತೆಯಲ್ಲಿ ನಾಮಿನಿಯನ್ನು ಯಾಕೆ ಸೇರಿಸಬೇಕು?, ಅದರ ಮಹತ್ವವೇನು? ಎಂಬುದನ್ನು ತಿಳಿದುಕೊಳ್ಳಲು ಡಿಮ್ಯಾಟ್ ಖಾತೆಗಳ ಬಗ್ಗೆ ಕೆಲವೊಂದು ಬೇಸಿಕ್ ವಿಚಾರಗಳನ್ನು ನಾವು ಅರಿತಿರಬೇಕಾಗುತ್ತದೆ.
ಡಿಮ್ಯಾಟ್ ಅಕೌಂಟ್: ಡಿಮ್ಯಾಟ್ ಖಾತೆ ಎಂಬುದು ನಿಮ್ಮ ಷೇರು ಪ್ರಮಾಣಪತ್ರಗಳು ಮತ್ತು ಎಲೆಕ್ಟ್ರಾನಿಕ್ ಸ್ವರೂಪದಲ್ಲಿರುವ ಇತರ ಸೆಕ್ಯೂರಿಟಿಗಳಿಗೆ ಬ್ಯಾಂಕ್ ಖಾತೆ ಎಂದರೆ ತಪ್ಪಾಗುವುದಿಲ್ಲ. 1996ರಲ್ಲಿ ರಾಷ್ಟ್ರೀಯ ಷೇರು ಮಾರುಕಟ್ಟೆ ಷೇರುಗಳ ವ್ಯಾಪಾರಕ್ಕಾಗಿ ಕಾಗದವನ್ನು ಬಳಸುವುದನ್ನು ಕಡಿಮೆ ಮಾಡಲು ನಿರ್ಧಾರ ಮಾಡಿತ್ತು. ಈಗ ಷೇರು ಮಾರುಕಟ್ಟೆಯ ವಹಿವಾಟುಗಳಲ್ಲಿ ಯಾವುದೇ ರೀತಿಯಲ್ಲಿ ಕಾಗದದ ಪ್ರಮಾಣಪತ್ರಗಳನ್ನು ಬಳಸುವುದಿಲ್ಲ.
ಡಿಮ್ಯಾಟ್ ನಾಮಿನಿ: ನೀವು ಬ್ಯಾಂಕ್ ಖಾತೆಯನ್ನು ತೆರೆದು, ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವಾಗ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡುವಾಗ ಅಥವಾ ವಿಮೆ ತೆಗೆದುಕೊಳ್ಳುವಾಗ ಒದಗಿಸಲಾದ ಕಾಲಂನಲ್ಲಿ ನೀವು ನಾಮಿನಿಯ ಹೆಸರನ್ನು ಬರೆಯಬೇಕಾಗುತ್ತದೆ. ಮುಂದಿನ ಕ್ಷಣದಲ್ಲಿ 'ಏನಾಗುತ್ತದೆ' ಎಂಬುದು ನಮಗೆ ಗೊತ್ತಿರದ ಕಾರಣದಿಂದ ನಾಮಿನಿ ಸೇರಿಸುವುದು ಮುಖ್ಯ. ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ನಿಮ್ಮ ಖಾತೆಗೆ ವಾರಸುದಾರರು ಬೇಕಲ್ಲವೇ? ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾಮಿನಿ ಸೇರಿಸುವುದನ್ನು ಬ್ಯಾಂಕ್‌ಗಳು, ಏಜೆನ್ಸಿಗಳು ಮತ್ತು ಹಣಕಾಸು ಸಂಸ್ಥೆಗಳು ಕಡ್ಡಾಯಗೊಳಿಸಿವೆ.
ಇನ್ನು ಡಿಮ್ಯಾಟ್ ಖಾತೆ ವಿಚಾರಕ್ಕೆ ಬರುವುದಾದರೆ, ನೀವು ಡಿಮ್ಯಾಟ್ ಖಾತೆಯನ್ನು ತೆರೆಯುವಾಗ ನಾಮಿನಿಯನ್ನು ಸೇರಿಸಲು ಸಾಧ್ಯವಾಗದಿದ್ದರೆ, ನಿಮ್ಮ ವಾರಸುದಾದರರು ನಿಮ್ಮ ಖಾತೆಯನ್ನು (ಸಾಮಾನ್ಯವಾಗಿ ಹಣ) ಕ್ಲೈಮ್ ಮಾಡುವ ಹಕ್ಕನ್ನು ಹೊಂದಿದ್ದರೂ ತೊಂದರೆಗಳನ್ನು ಎದುರಿಸಬಹುದು. ಅದರ ಜೊತೆಗೆ ಎರಡು ಮೂರು ನಾಮಿನಿಗಳನ್ನು ಸೇರಿಸಿ, ಶೇಕಡಾವಾರು ಕ್ಲೈಮ್ ಮಾಡಲು ಕೂಡಾ ನೀವು ಅವರಿಗೆ ಅವಕಾಶ ಒದಗಿಸಲು ಕೂಡಾ ಆಯ್ಕೆಯಿದೆ.
ನಾಮಿನಿಯಿಂದ ಮಾಡದಿದ್ದರೆ: ನಿಮ್ಮ ಖಾತೆಗಳು ಮತ್ತು ಹೂಡಿಕೆಗಳಿಗೆ ನಾಮಿನಿ ಇಲ್ಲದಿದ್ದರೆ, ನಿಮ್ಮ ಕುಟುಂಬದವರು ಅಥವಾ ಸಂಬಂಧಿಗಳು ಆ ಖಾತೆಯನ್ನು ಕ್ಲೈಮ್ ಮಾಡಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಇದಕ್ಕೆ 'ವಿಲ್' ಅಥವಾ ಉತ್ತರಾಧಿಕಾರ ಪ್ರಮಾಣಪತ್ರದಂತಹ ದಾಖಲೆಗಳು ಅಗತ್ಯವಿರುತ್ತದೆ. ಡಿಮ್ಯಾಟ್ ಖಾತೆಯನ್ನು ತೆರೆಯುವಾಗ ನಾಮಿನಿಯ ಹೆಸರನ್ನು ಸೇರಿಸುವ ಮೂಲಕ ಈ ಎಲ್ಲಾ ತೊಂದರೆಗಳನ್ನು ತಪ್ಪಿಸಬಹುದಾಗಿದೆ.
ಈಗ ಡಿಮ್ಯಾಟ್ ಖಾತೆಯನ್ನು ಡಿಜಿಟಲ್ ಮೂಲಕ ತೆರೆಯಲು ಸಾಧ್ಯವಿದ್ದರೂ, ನಾಮಿನಿಗಾಗಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತಿತ್ತು. ಆದರೆ, ಇತ್ತೀಚೆಗೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಈ ನಿಯಮಗಳಿಗೆ ತಿದ್ದುಪಡಿ ತಂದಿದೆ. ಇ-ಸೈನ್ ಮೂಲಕ ನಾಮಿನಿಯ ನಾಮನಿರ್ದೇಶನವನ್ನು ಸುಗಮಗೊಳಿಸಲಾಗಿದೆ. ಅಕ್ಟೋಬರ್ 1, 2021ರಿಂದ, ಡಿಮ್ಯಾಟ್ ಖಾತೆಗಳನ್ನು ತೆರೆದವರು ನಾಮಿನಿಯ ಹೆಸರನ್ನು ನಮೂದಿಸಬೇಕಾಗುತ್ತದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಖಾತೆಗಳನ್ನು ತೆರೆದವರು ನಾಮಿನಿಯ ಹೆಸರನ್ನು ಸೇರಿಸಬಹುದು ಅಥವಾ ಬದಲಾಯಿಸಬಹುದು. ಜಂಟಿ ಖಾತೆಗಳನ್ನು ಹೊಂದಿರುವವರು ನಾಮಿನಿಯ ಹೆಸರನ್ನು ಸೇರಿಸಲು ಅಥವಾ ಬದಲಾಯಿಸಲು ಪ್ರತಿಯೊಬ್ಬರೂ ಸಹಿ ಮಾಡಬೇಕಾಗುತ್ತದೆ. ಅಂಥವರಿಗೆ ನಿಗದಿತ ಅರ್ಜಿ ನಮೂನೆಯನ್ನು ಹೊಂದಿರುತ್ತದೆ.
ನಾಮಿನಿಯ ಹೆಸರನ್ನು ಸೇರಿಸಲು ಕೊನೆಯ ದಿನಾಂಕ: ಸೆಬಿ ನಿಯಮಗಳ ಪ್ರಕಾರ ಡಿಮ್ಯಾಟ್ ಕ್ಲೈಂಟ್‌ಗಳು ತಮ್ಮ ಖಾತೆಗಳಿಗೆ ಮಾರ್ಚ್ 31, 2022ರೊಳಗೆ ನಾಮಿನೇಷನ್ ಸಲ್ಲಿಸಬೇಕು. ಇಲ್ಲದಿದ್ದರೆ, ಖಾತೆ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ, ನಿಮ್ಮ ಖಾತೆಗಳಿಗೆ ನಾಮಿನಿಗಳು ಇದ್ದಾರೆಯೇ ಎಂದು ಪರಿಶೀಲಿಸಿ, ನೋಡಿಕೊಳ್ಳಿ. ನೀವು ಸೇರಿಸಿರುವ ನಾಮಿನಿಯ ಹೆಸರನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು ಎಂಬುದು ಅತ್ಯಂತ ಮುಖ್ಯ ಎಂದು ನೀವು ತಿಳಿದುಕೊಳ್ಳಬೇಕಾದ ಅಂಶ.
ಇದನ್ನೂ ಓದಿ: ಸತತ ಕುಸಿತ ಕಾಣುತ್ತಿರುವ ಸೆನ್ಸೆಕ್ಸ್: ಇಂದು ಆರಂಭದಲ್ಲೇ 800 ಅಂಕ ಕಳೆದುಕೊಂಡು ತಲ್ಲಣ