ನವದೆಹಲಿ: ಅಂತಿಮ ಬಿಡ್ಡಿಂಗ್ ದಿನಾಂಕಕ್ಕೆ ಕೇವಲ ಒಂದು ತಿಂಗಳು ಬಾಕಿ ಇದ್ದು, ಟಾಟಾ ಸಮೂಹವು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸನ್ನದ್ಧವಾಗಿದೆ.
ಈಗಾಗಲೇ ವಿಮಾನಯಾನ ವ್ಯವಹಾರದಲ್ಲಿ ಅನುಭವ ಹೊಂದಿರುವ ಟಾಟಾ ಸಮೂಹವು ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ತೋರಿಸಿದೆ. ಒಂದು ಕಾಲದಲ್ಲಿ ಟಾಟಾ ಸಂಸ್ಥೆಯ ಅಡಿಯಲ್ಲಿಯೇ ಏರ್ ಇಂಡಿಯಾ ಇತ್ತು.
ಕೋವಿಡ್ -19 ಸಾಂಕ್ರಾಮಿಕ ಮತ್ತು ಜಾಗತಿಕವಾಗಿ ವಿಮಾನಯಾನ ಹಾಗೂ ಪ್ರವಾಸೋದ್ಯಮಕ್ಕೆ ಉಂಟಾಗಿರುವ ಅಡೆತಡೆಗಳಿಂದಾಗಿ ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಈ ಸಮಯದಲ್ಲಿ ತನ್ನದೇ ಕೂಸಾದ ಏರ್ ಇಂಡಿಯಾವನ್ನ ಟಾಟಾ ಸಮೂಹ ಬಿಡ್ ನಲ್ಲಿ ಪಾಲ್ಗೊಂಡು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಮುಂದಾಗುವ ಸಾಧ್ಯತೆ ಇದೆ.
ಕೋವಿಡ್ -19 ದಾಳಿಯ ಮುಂಚೆಯೇ ಏರ್ ಇಂಡಿಯಾ ಗಂಭೀರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಇದೀಗ ಕೊರೊನಾ ಸಮಸ್ಯೆಗಳ ಪರಿಣಾಮ ವಾಯುಯಾನ ಕ್ಷೇತ್ರದಲ್ಲಿ ಹಣಕಾಸು ಪರಿಸ್ಥಿತಿ ಮತ್ತಷ್ಟು ಹದ ಗೆಟ್ಟಿದೆ. ಏರ್ ಇಂಡಿಯಾ ಹಣಕಾಸು ಬಿಕ್ಕಟ್ಟು ಕೊನೆಗಾಣಿಸಲು ಕೇಂದ್ರ ಖಾಸಗಿಯವರಿಗೆ ಒಪ್ಪಿಸಲು ಮುಂದಾಗಿದೆ.
ಈ ಹಿಂದೆ ಬಿಡ್ ಕರೆಯಲಾಗಿತ್ತಾದರೂ ಯಾವುದೇ ಖಾಸಗಿ ಸಂಸ್ಥೆ ಅಪಾರ ಬಂಡವಾಳ ಹೂಡಿ ಏರ್ ಇಂಡಿಯಾ ಖರೀದಿಸಲು ಮುಂದೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಖಾಸಗೀಕರಣ ನನೆಗುದಿಗೆ ಬಿದ್ದಿತ್ತು. ಆದರೆ ನಷ್ಟದಲ್ಲಿರುವ ಕಂಪನಿಯನ್ನ ಸರಿದಾರಿಗೆ ತರಲು ಇಲಾಖೆ ಮತ್ತೊಮ್ಮೆ ಬಿಡ್ ಕರೆದಿದೆ.