ಮುಂಬೈ : ನೀವು ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಚನೆಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಪ್ರತಿ ಗ್ರಾಂಗೆ ಚಿನ್ನಕ್ಕೆ 4,807 ರೂಪಾಯಿ ನಿಗದಿಪಡಿಸಿದೆ. ಹಳದಿ ಲೋಹದ ಮೇಲೆ ಹೂಡಿಕೆ ಮಾಡಲು ಆಸಕ್ತಿ ಇರುವವರು, ಖರೀದಿದಾರರು ಭೌತಿಕವಾಗಿ ಚಿನ್ನವನ್ನು ಖರೀದಿಸುವುದಕ್ಕಿಂತ ಈ ಯೋಜನೆ ಬಾಂಡ್‌ಗಳನ್ನು ಖರೀದಿಸುವುದರಿಂದ ಹಲವಾರು ಅನುಕೂಲಗಳಿವೆ. ಹೀಗಾಗಿ, ಚಿನ್ನದ ಬಾಂಡ್‌ಗಳಿಗಾಗಿ ಚಂದಾದಾರರಾಗಬಹುದು. 2021ರ ಜುಲೈ 12ರಿಂದ 16ರವರೆಗೆ ಬಾಂಡ್‌ಗಳ ಖರೀದಿಗೆ ಚಂದಾದಾರರಾಗಲು ಅವಕಾಶ ಕಲ್ಪಿಸಲಾಗಿದೆ.
ಸವರನ್ ಗೋಲ್ಡ್ ಬಾಂಡ್‌ಗಳಿಗೆ ಸರ್ಕಾರಿ ಭದ್ರತೆಯಾಗಿದ್ದು, ಆರ್‌ಬಿಐ ಇದನ್ನು ವಿತರಿಸಲಿದೆ. ಈ ಬಾಂಡ್‌ಗಳನ್ನು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಈ ಬಾಂಡ್‌ಗಳ ಮೇಲೆ ಬಡ್ಡಿಯನ್ನೂ ನೀಡಲಾಗುತ್ತದೆ.
ಚಿನ್ನದ ಬಾಂಡ್‌ಗಳ ಮೇಲೆ ಹೂಡಿಕೆ ಮಾಡಿದರೆ ಇರುವ ಲಾಭಗಳು
ಸವರನ್ ಚಿನ್ನದ ಬಾಂಡ್‌ಗಳಿಗೆ ವರ್ಷಕ್ಕೆ 2.5ರಷ್ಟು ಬಡ್ಡಿಯನ್ನು ನಿಗದಿ ಮಾಡಲಾಗಿದೆ. ಭೌತಿಕ ಚಿನ್ನವನ್ನು ಖರೀದಿಸುವಾಗ ಪಾವತಿಸುವುದಕ್ಕಿಂತ ಭಿನ್ನವಾಗಿವಾಗಿದೆ. ಯಾಕೆಂದರೆ, ಚಿನ್ನದ ಬಾಂಡ್‌ಗಳ ಖರೀದಿಗೆ ಯಾವುದೇ ಸರಕು ಮತ್ತು ಸೇವೆಗಳ (ಜಿಎಸ್‌ಟಿ) ತೆರಿಗೆ ವಿಧಿಸಲಾಗುವುದಿಲ್ಲ.
ಕಾಗದದ ರೂಪದಲ್ಲಿರುವ ಚಿನ್ನದ ಬಾಂಡ್‌ಗಳು ಇರುವುದರಿಂದ ಸಂಗ್ರಹಿಸಿಡುವುದು ಕಷ್ಟವಾಗುವುದಿಲ್ಲ. ಕಳ್ಳತನ ಆಗುವ ಸಾಧ್ಯತೆಗಳು ತೀರಾ ಕಡಿಮೆ. ಚಿನ್ನಾಭರಣದ ಅಂಗಡಿಗಳಲ್ಲಿ ಹೆಚ್ಚುವರಿ ತಯಾರಿಕಾ ಶುಲ್ಕ ಹಾಗೂ ಚಿನ್ನದ ಶುದ್ಧತೆಯ ಬಗ್ಗೆ ಅನುಮಾನಗಳು ಇರುತ್ತವೆ. ಆದರೆ, ಇಂತಹ ಸನ್ನಿವೇಶಗಳು ಇಲ್ಲಿ ಉದ್ಭವಿಸುವುದಿಲ್ಲ. ಬ್ಯಾಂಕುಗಳಲ್ಲಿ ಚಿನ್ನವನ್ನು ಅಡ ಇಟ್ಟು ಸಾಲ ಪಡೆಯುವ ಮಾದರಿಯಲ್ಲೇ ಚಿನ್ನದ ಬಾಂಡ್‌ಗಳ ಮೇಲೆ ಸಾಲ ಪಡೆಯಬಹುದಾಗಿದೆ.
ಸವರನ್ ಗೋಲ್ಡ್ ಬಾಂಡ್‌ಗಳ ಮೇಲೆ ಹೂಡಿಯಿಂದಾಗುವ ಅಪಾಯಗಳೇನು?
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಾಗ ಬಾಂಡ್‌ಗಳ ಮೌಲ್ಯವೂ ಕುಸಿಯುತ್ತದೆ. ಆದರೆ, ಚಂದಾದಾರರು ಗ್ರಾಂಗೆ ಎಷ್ಟು ಹಣ ಪಾವತಿಸಿರುತ್ತಾರೆ ಆ ಮೊತ್ತ ಸಿಗಲಿದೆ.
ಗೋಲ್ಡ್ ಬಾಂಡ್‌ನ ಅವಧಿ ಎಷ್ಟು?
ಇದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಗೋಲ್ಡ್ ಬಾಂಡ್‌ನ ಅವಧಿ 8 ವರ್ಷಗಳಾಗಿದ್ದು, ಮಧ್ಯದಲ್ಲೇ ವಾಪಸ್ ಪಡೆಯಬೇಕಾದರೆ 5 ವರ್ಷ ಮುಕ್ತಾಯವಾಗಿರಬೇಕು. ಆ ನಂತರವೇ ಹೂಡಿಕೆಯ ಹಣ ವಾಪಸ್ ಪಡೆಯಬಹುದಾಗಿದೆ.
ಯಾರೆಲ್ಲಾ ಹೂಡಿಕೆ ಮಾಡಬಹುದು?
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999ರ ಅಡಿಯಲ್ಲಿ ಭಾರತದಲ್ಲಿ ವಾಸಿಸುವ ವ್ಯಕ್ತಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿದ್ದಾರೆ. ಹೆಚ್‌ಯುಎಫ್‌ಗಳು (ಹಿಂದೂ ಅವಿಭಜಿತ ಕುಟುಂಬಗಳು), ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಅರ್ಹ ಹೂಡಿಕೆದಾರರಾಗಿದ್ದಾರೆ. ಜಂಟಿಯಾಗಿಯೂ ಹೂಡಿಕೆ ಮಾಡಲು ಆರ್‌ಬಿಐ ಅನುಮತಿ ನೀಡಿದೆ. ಜೊತೆಗೆ ಅಪ್ರಾಪ್ತ ವಯಸ್ಕರ ಪರವಾಗಿ ಒಬ್ಬರು ಚಂದಾದಾರರಾಗಬಹುದು.
ಹೂಡಿಕೆ ಉದ್ದೇಶದಿಂದ ರೂಪಿಸಿರುವ ಚಿನ್ನದ ಬಾಂಡ್‌ನಲ್ಲಿ ಗ್ರಾಹಕರು ವಾರ್ಷಿಕವಾಗಿ 1 ಗ್ರಾಂನಿಂದ ಗರಿಷ್ಠ 4 ಕೆಜಿವರೆಗೆ ಹೂಡಿಕೆ ಮಾಡಬಹುದು. ಚಿನ್ನದ ಗಟ್ಟಿ ಬದಲು ಬಾಂಡ್ ಖರೀದಿಸುವ ಅವಕಾಶ ಇದಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಎನ್‌ಬಿಎಫ್‌ಸಿ ಹಾಗೂ ಅಂಚೆ ಕಚೇರಿಗಳಲ್ಲಿ ಬಾಂಡ್‌ಗಳು ಸಿಗಲಿವೆ.