ನವದೆಹಲಿ: ಅರ್ಥಶಾಸ್ತ್ರ ವಿಭಾಗದಲ್ಲಿ ಇತ್ತೀಚೆಗೆ ಪ್ರತಿಷ್ಠಿತ ನೊಬೆಲ್ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಮೂಲದ ಅಮೆರಿಕದ ನಿವಾಸಿ ಅಭಿಜಿತ್ ಬ್ಯಾನರ್ಜಿ ಅವರು ಇಂದು ದೆಹಲಿಯ ಪ್ರಧಾನಿಗಳ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.
ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿದ ಕುರಿತು ಮಾಹಿತಿ ನೀಡಿದ ಬ್ಯಾನರ್ಜಿ, ಮೋದಿ ಅವರನ್ನು ಭೇಟಿ ಮಾಡಿದ್ದು, ಗೌರವದ ಸಂಗತಿ. ಪ್ರಧಾನಿ ಅವರು ಭಾರತದ ಬಗ್ಗೆ ತಮ್ಮ ಕೌಶಲ್ಯಯುಕ್ತ ಚಿಂತನಾ ಶೈಲಿಯ ಬಗ್ಗೆ ದೀರ್ಘವಾಗಿ ಮಾತನಾಡಿದರು. ಅವರ ಚಿಂತನಾ ಶೈಲಿ ತುಂಬ ವಿಶಿಷ್ಟವಾದದ್ದು ಎಂದು ಬಣ್ಣಿಸಿದರು.
ಮಾಧ್ಯಮಗಳು ನನ್ನನ್ನು ಹೇಗೆ ಮೋದಿ ವಿರೋಧಿ ಹೇಳಿಕೆಗೆ ಬಲಿ ಕೆಡವಲು ಯತ್ನಿಸುತ್ತಿವೆ ಎಂಬ ಬಗ್ಗೆಯೂ ಅವರು ತಮಾಷೆ ಮಾಡಿದ್ದರು. ಮೋದಿ ಟಿವಿ ವೀಕ್ಷಿಸುತ್ತಾರೆ. ನಿಮ್ಮನ್ನು ಮೋದಿ ನೋಡುತ್ತಾರೆ. ನೀವೇನು ಮಾಡಲು ಯತ್ನಿಸುತ್ತಿದ್ದೀರಿ ಎಂಬುದು ಮೋದಿಗೆ ಗೊತ್ತಿದೆ ಎನ್ನುತ್ತಾ ಮ್ಯಾಧ್ಯಮಗಳ ನಡೆಯ ಬಗ್ಗೆ ಕಾಲೆಳೆದಿದ್ದನ್ನು ಹಂಚಿಕೊಂಡರು.
ಮೋದಿ ಭೇಟಿಯು ಅತ್ಯಂತ ವಿಶಿಷ್ಟವಾದದ್ದು. ಪ್ರಧಾನಿ ಈ ವೇಳೆ ಆಡಳಿತ ಯಂತ್ರ ಮತ್ತು ಸರ್ಕಾರಿ ಅಧಿಕಾರಿಗಳ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಸುಧಾರಣೆ ತರುವ ತಮ್ಮ ಪ್ರಯತ್ನಗಳ ಬಗ್ಗೆಯೂ ವಿವರಿಸಿದ್ದಾರೆ. ವಾಸ್ತವತೆಯನ್ನು ಅರಿತು ಕೆಲಸ ಮಾಡುವ ಅಧಿಕಾರಿಗಳು ಭಾರತಕ್ಕೆ ಅತ್ಯಂತ ಅವಶ್ಯಕತೆ ಇದೆ ಎಂದಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು.