ನವದೆಹಲಿ: ಭಾರತೀಯ ತಯಾರಿಕೆಯ ವಿದೇಶಿ ಮದ್ಯದ ಮಾರಾಟ (ಐಎಂಎಫ್‌ಎಲ್) ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ 6ರಷ್ಟರ ಬೆಳವಣಿಗೆಯೊಂದಿಗೆ ಚೇತರಿಸಿಕೊಂಡಿದೆ. ತ್ರೈಮಾಸಿಕದಲ್ಲಿ ಏರಿಕೆ ಕಂಡಿದ್ದರೇ ಒಟ್ಟಾರೆ ಆಧಾರದ ಮೇಲೆ 2020-21ರಲ್ಲಿ ಶೇ 12ರಷ್ಟು ಕುಸಿದಿದೆ.
ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಹರಿಯಾಣದಂತಹ ರಾಜ್ಯಗಳು 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಐಎಂಎಫ್ಎಲ್ ಮಾರಾಟದಲ್ಲಿ 40 ಪ್ರತಿಶತದಷ್ಟು ಬೆಳವಣಿಗೆ ವರದಿ ಮಾಡಿವೆ. ಮಹಾರಾಷ್ಟ್ರ ಮತ್ತು ಗೋವಾ ಕ್ರಮವಾಗಿ ಶೇ 23 ಮತ್ತು ಶೇ 22ರಷ್ಟು ಬೆಳವಣಿಗೆ ದಾಖಲಿಸಿದೆ ಎಂಬುದು ಕಾನ್ಫೆಡರೇಷನ್ ಆಫ್ ಇಂಡಿಯನ್ ಮದ್ಯಯುಕ್ತ ಪಾನೀಯ ಕಂಪನಿಗಳ (ಸಿಐಎಬಿಸಿ) ಒಕ್ಕೂಟ ಬಿಡುಗಡೆ ಮಾಡಿದ ದತ್ತಾಂಶದಲ್ಲಿದೆ.
ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಅತ್ಯಂತ ಕಳಪೆ ಮೊದಲ ತ್ರೈಮಾಸಿಕದ ನಂತರ (2020ರ ಏಪ್ರಿಲ್-ಜೂನ್ 2020) ಚೇತರಿಕೆ ಕಂಡಿದೆ. ಆದರೆ, ವಾರ್ಷಿಕ ದರದಲ್ಲಿ ಕುಸಿತ ಕಂಡಿದೆ. ಮಾರಾಟವು ಅಖಿಲ ಭಾರತ ಆಧಾರದ ಮೇಲೆ ಸಕಾರಾತ್ಮಕ ಪ್ರವೃತ್ತಿ ತೋರಿಸಿದೆ. ಪ್ರತಿ ತ್ರೈಮಾಸಿಕದಲ್ಲಿ ಸುಧಾರಣೆಯಾಗಿದ್ದು, ಅಂತಿಮವಾಗಿ ನಾಲ್ಕನೇ ತ್ರೈಮಾಸಿಕದಲ್ಲಿ ದೃಢವಾದ ಪ್ರದರ್ಶನದೊಂದಿಗೆ ವರ್ಷವನ್ನು ಕೊನೆಗೊಳಿಸಿತು ಎಂದು ಸಿಐಎಬಿಸಿ ಹೇಳಿದೆ.
ಈ ತ್ರೈಮಾಸಿಕದಲ್ಲಿ ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಐಎಂಎಫ್‌ಎಲ್ ಮಾರಾಟವು ಶೇ 31ರಷ್ಟು, ಪಶ್ಚಿಮ ಬಂಗಾಳದಲ್ಲಿ ಶೇ 28ರಷ್ಟು ಮತ್ತು ರಾಜಸ್ಥಾನದಲ್ಲಿ ಶೇ 20ರಷ್ಟು ಕುಸಿತ ಕಂಡಿದೆ. ಶೇ 52ರಷ್ಟು ಕುಸಿತವು ಮೇಘಾಲಯದಲ್ಲಿ ಮತ್ತು ಶೇ 43ರಷ್ಟು ಇಳಿಕೆ ಕೇಂದ್ರಾಡಳಿತ ಪ್ರದೇಶವಾದ ದಮನ್, ಡಿಯು ಮತ್ತು ಸಿಲ್ವಾಸ್ಸಾದಲ್ಲಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಈ ರಾಜ್ಯಗಳಲ್ಲಿ ಹೆಚ್ಚಿನವು ಕೋವಿಡ್-19 ಮೊದಲ ಅಲೆಯಲ್ಲಿ ಹೆಚ್ಚಿನ ಸೆಸ್ ಮತ್ತು ತೆರಿಗೆ ವಿಧಿಸಿದವು. ಇತರ ರಾಜ್ಯಗಳಿಗಿಂತ ಭಿನ್ನವಾಗಿ ಅದನ್ನು ಹಿಂತೆಗೆದುಕೊಳ್ಳಲಿಲ್ಲ ಅಥವಾ ಕಡಿಮೆ ಮಾಡಲಿಲ್ಲ. ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಿಂದ ಮಾರುಕಟ್ಟೆಯಲ್ಲಿ ಬದಲಾವಣೆ ಮಾಡಬಹುದಾಗಿದೆ ಎಂದು ಹೇಳಿದೆ.
ದೆಹಲಿ ಮತ್ತು ಚಂಡೀಗಢದಂತಹ ಮಾರುಕಟ್ಟೆಗಳು ಜನವರಿ-ಮಾರ್ಚ್‌ನಲ್ಲಿ ಕ್ರಮವಾಗಿ ಶೇ 2 ಮತ್ತು ಶೇ 4ರಷ್ಟು ಬೆಳವಣಿಗೆ ದಾಖಲಿಸಿವೆ. ಮಾರಾಟದ ಬೆಳವಣಿಗೆ ಅಸ್ಸಾಂನಲ್ಲಿ ಸಮತಟ್ಟಾಗಿತ್ತು. 2021ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಐಎಂಎಫ್‌ಎಲ್‌ನ ಒಟ್ಟು ಮಾರಾಟವು 305 ಮಿಲಿಯನ್ ಕೇಸ್ಗಳಾಗಿದ್ದು (ತಲಾ 9 ಲೀಟರ್), ಇದು 2019-20ಕ್ಕಿಂತ ಶೇ 12ರಷ್ಟು ಕಡಿಮೆಯಾಗಿದೆ.