ನವದೆಹಲಿ: ಜಗತ್ತಿನಲ್ಲಿ ಅತಿಹೆಚ್ಚು ಮೊಬೈಲ್ ಬಳಕೆದಾರರನ್ನು ಹೊಂದಿರುವ ಏಷ್ಯಾದ ಪ್ರಬಲ ಆರ್ಥಿಕ ರಾಷ್ಟ್ರಗಳಾದ ಭಾರತ ಮತ್ತು ಚೀನಾ ನಡುವೆ ಇಂಟರ್ನೆಟ್ ಬಳಕೆಯಲೂ ಸ್ಪರ್ಧೆ ಇದೆ.
ವಿಶ್ವದಲ್ಲಿ ಅತಿಹೆಚ್ಚು ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಶೇ 12ರಷ್ಟು ಪಾಲು ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಅಗ್ಗದ ದರದಲ್ಲಿ ಡೇಟಾ ಹಾಗೂ ಉಚಿತ ಅನಿಯಮಿತ ಕರೆ ಸೇವೆ ನೀಡುತ್ತಿರುವ ರಿಲಯನ್ಸ್ ಜಿಯೋ ಇದಕ್ಕೆ ಪೂರಕವಾಗಿದೆ ಎಂದು ಮೇರಿ ಮೀಕರ್-2019 ಸಮೀಕ್ಷೆ ತಿಳಿಸಿದೆ.
2018ರಲ್ಲಿ 3.8 ಬಿಲಿಯನ್ ಅಥವಾ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ 51ರಷ್ಟು ಜನರು ಇಂಟರ್ನೆಟ್ ಬಳಸುತ್ತಿದ್ದಾರೆ. ಇದಕ್ಕೂ ಹಿಂದಿನ ವರ್ಷ 3.6 ಬಿಲಿಯನ್ (ಶೇ 49ರಷ್ಟು) ಜನರು ಅಂತರ್ಜಾಲ ಸೇವೆ ಪಡೆಯುತ್ತಿದ್ದರು.
ಜಾಗತಿಕ ಪಾಲಿನಲ್ಲಿ ಶೇ 21ರಷ್ಟು ಇಂಟರ್ನೆಟ್ ಸೇವಾದಾರರನ್ನು ಹೊಂದಿರುವ ಚೀನಾ ನಂಬರ್ 1 ಸ್ಥಾನದಲ್ಲಿದೆ. ಇದರ ಬಳಿಕ ಅಮೆರಿಕ ಶೇ 8ರಷ್ಟು ಮೂಲಕ ನಂತರದಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ.