ಮುಂಬೈ: ದೇಶೀಯ ಬ್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ, ಬ್ಯಾಂಕ್ನ ಕೃಷಿ ಸಾಲದ ಮೌಲ್ಯಮಾಪನಕ್ಕಾಗಿ ಉಪಗ್ರಹ ದತ್ತಾಂಶವನ್ನು ಐಸಿಐಸಿಐ ಬ್ಯಾಂಕ್ ನಿಯೋಜಿಸುತ್ತಿದೆ. ಇದು ರೈತರು ಹಾಗೂ ಬ್ಯಾಂಕ್ಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ದೇಶದ ಕೆಲ ಆಯ್ದ ಹಳ್ಳಿಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಇದೀಗ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನ 500 ಗ್ರಾಮಗಳಿಗೆ ಈ ಯೋಜನೆಯನ್ನು ವಿಸ್ತರಿಸುತ್ತಿದ್ದೇವೆ ಎಂದು ದೇಶದ ಎರಡನೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಕಳೆದ ಮಂಗಳವಾರ ತಿಳಿಸಿದೆ.
ಇದೇ ಉದ್ದೇಶಕ್ಕಾಗಿ ಬ್ಯಾಂಕ್, ಇಸ್ರೋ ಮತ್ತು ನಾಸಾದಿಂದ ಸುಲಭವಾಗಿ ಲಭ್ಯವಿರುವ ಉಪಗ್ರಹ ಚಿತ್ರಗಳನ್ನು ಬಳಸುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಸುಮಾರು 63,000 ಹಳ್ಳಿಗಳಲ್ಲಿ ಇದನ್ನು ಸ್ಥಾಪಿಸಲು ಬ್ಯಾಂಕ್ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಮುಂದಿನ ಒಂದು ತಿಂಗಳಲ್ಲಿ 25 ಸಾವಿರ ಹಳ್ಳಿಗಳಲ್ಲಿ ಈ ಯೋಜನೆಯನ್ನು ಅಳವಡಿಸಿಕೊಳ್ಳುತ್ತೇವೆ. ನಂತರದ ಎರಡು ತಿಂಗಳಲ್ಲಿ ಅದನ್ನು 63,000 ಹಳ್ಳಿಗಳಿಗೆ ವಿಸ್ತರಿಸುತ್ತೇವೆ ಎಂದು ಐಸಿಐಸಿಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಅನುಪ್ ಬಾಗ್ಚಿ ತಿಳಿಸಿದ್ದಾರೆ. ಆದರೆ ಬ್ಯಾಂಕ್ ಹಾಗೂ ರೈತರಿಗೆ ಯಾವ ರೀತಿ ಹಾಗೂ ಹೇಗೆ ಈ ವೆಚ್ಚ ಕಡಿಮೆಯಾಗುತ್ತದೆ ಎಂಬುದರ ಅವರು ಪರಿಮಾಣಾತ್ಮಕ ಮಾಹಿತಿ ನೀಡಲು ನಿರಾಕರಿಸಿದ್ದಾರೆ.