ನವದೆಹಲಿ: ಮುಂಬರುವ ಹೋಳಿ ಹಬ್ಬಕ್ಕೂ ಮುಂಚಿತವಾಗಿ 'ವಿವಾದ್ ಸೆ ವಿಶ್ವಾಸ್' ಯೋಜನೆಯನ್ನು ತಿಳಿಸುತ್ತೇವೆ ಎಂದು CBDTಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಎರಡನೇ ಅವಧಿಗೆ ಸಂಸತ್ತಿನಲ್ಲಿ ಸಭೆ ಸೇರುವ ವೇಳೆಗೆ, ತೆರಿಗೆ ಪ್ರಕರಣಗಳ ಇತ್ಯರ್ಥಕ್ಕಾಗಿ ಜಾರಿಗೆ ತರಲು ಯೋಜಿಸಿರುವ ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹಣಕಾಸು ಸಚಿವಾಲಯ ಅಧಿಕಾವಧಿ ಕೆಲಸ ಮಾಡುತ್ತಿದೆ. ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ 'ವಿವಾದ್ ಸೆ ವಿಶ್ವಾಸ್' ಯೋಜನೆಯನ್ನು ಘೋಷಿಸಿದ್ದರು.
ಮೇಲ್ಮನವಿ ಆಯುಕ್ತರು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಧಿಕರಣ (ಐಟಿಎಟಿ), ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ವೇದಿಕೆಗಳ ಮುಂದೆ 4.8 ಲಕ್ಷಕ್ಕೂ ಹೆಚ್ಚು ನೇರ ತೆರಿಗೆ ವಿವಾದಗಳು ಬಾಕಿ ಉಳಿದಿವೆ. ಈ ಪ್ರಕರಣಗಳಲ್ಲಿ ಸುಮಾರು 9 ಲಕ್ಷ ಕೋಟಿ ರೂಪಾಯಿ ಸಿಲುಕಿಕೊಂಡಿದ್ದು, ಈ ಯೋಜನೆಯ ಮೂಲಕ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮರುಸಂಗ್ರಹಿಸುವ ಭರವಸೆಯನ್ನ ಸರ್ಕಾರ ಹೊಂದಿದೆ.
ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್, ತೆರಿಗೆ ಪಾವತಿದಾರರು ವಿವಾದಿತ ತೆರಿಗೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಅಲ್ಲದೇ ಮಾರ್ಚ್ 31 ರ ಮೊದಲು ಪಾವತಿಸಿದರೆ ಯಾವುದೇ ಬಡ್ಡಿ ಅಥವಾ ದಂಡವನ್ನು ಪಾವತಿಸುವುದರಿಂದ ಸಂಪೂರ್ಣ ಮನ್ನಾ ಪಡೆಯುತ್ತಾರೆ ಎಂದು ಹೇಳಿದ್ದರು.
ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಈ ಹಣಕಾಸು ವರ್ಷದಲ್ಲಿ ಈ ಯೋಜನೆಯಿಂದ ಸಾಕಷ್ಟು ಆದಾಯ ಪಡೆಯಲು ಸರ್ಕಾರ ಎದುರು ನೋಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು ತನ್ನ ಬಜೆಟ್ ಅಂದಾಜಿಗಿಂತ 2.5 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿರುವುದರಿಂದ ಇದು ಆದಾಯ ಕೊರತೆಯನ್ನು ಕಡಿಮೆ ಮಾಡುತ್ತದೆ.
ಆದಾಗ್ಯೂ, ನೇರ ತೆರಿಗೆ ಯೋಜನೆ ಜೂನ್ ಅಂತ್ಯದವರೆಗೆ ತೆರೆದಿರುತ್ತದೆ. ಆದರೆ, ಈ ತಿಂಗಳ ನಂತರ ಯೋಜನೆ ಪಡೆಯುವ ತೆರಿಗೆದಾರರು ತೆರಿಗೆ ಬಾಕಿ ಹಣವನ್ನು ಪೂರ್ಣವಾಗಿ ಪಾವತಿಸುವುದರ ಜೊತೆಗೆ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.