ನ್ಯೂಯಾರ್ಕ್(ಅಮೆರಿಕ): ಫೋರ್ಡ್ ಮತ್ತು ಅದರ ಪಾಲುದಾರ ಕಂಪನಿಯು 2025 ರ ವೇಳೆಗೆ ಮೂರು ವಿದ್ಯುತ್-ವಾಹನ ಬ್ಯಾಟರಿ ಕಾರ್ಖಾನೆಗಳು(electric-vehicle battery factories) ಮತ್ತು ಆಟೋ ಜೋಡಣೆ ಘಟಕವನ್ನು ಸ್ಥಾಪಿಸಲು ಯೋಜಿಸಿದೆ. ಈ ಕಂಪನಿಗಳು ಭವಿಷ್ಯದಲ್ಲಿ ಅಂದಾಜು 10,800 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿವೆ.
ಕೆಂಟುಕಿ ಮತ್ತು ಟೆನ್ನೆಸ್ಸಿಗಳಲ್ಲಿ ನಿರ್ಮಿಸಲಿರುವ ಕಾರ್ಖಾನೆಗಳು ಫೋರ್ಡ್ ಮತ್ತು ಲಿಂಕನ್ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತರ ಅಮೆರಿಕದಲ್ಲಿ ಉತ್ಪಾದಿಸಲ್ಪಡುವ ಬ್ಯಾಟರಿಗಳನ್ನು ತಯಾರಿಸುತ್ತವೆ.
ಹೊಸ ಕಾರ್ಖಾನೆಗಳು ಉದ್ಯೋಗಗಳನ್ನು ಸೃಷ್ಟಿಸುವುದರ ಜತೆಗೆ ಆಕರ್ಷಕ ವೇತನವನ್ನೂ ನೀಡುತ್ತದೆ. ಬಹುತೇಕ ಉದ್ಯೋಗಗಳು ಪೂರ್ಣ ಸಮಯದ(full time) ಉದ್ಯೋಗಗಳಾಗಿರುತ್ತವೆ.
ಫೋರ್ಡ್ ತನ್ನ ಪಾಲುದಾರ ಸಂಸ್ಥೆ ದಕ್ಷಿಣ ಕೊರಿಯಾದ ಎಸ್‌ಕೆ ಇನ್ನೋವೇಶನ್ ಜೊತೆಗೂಡಿ, ಗ್ರಾಮೀಣ ಸ್ಟ್ಯಾಂಟನ್, ಟೆನ್ನೆಸ್ಸಿಯಲ್ಲಿ 5.6 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ.
ಅಮೆರಿಕದಲ್ಲಿ ಸದ್ಯ ಕೇವಲ ಶೇಕಡಾ 1 ರಷ್ಟು ವಿದ್ಯುತ್ ಚಾಲಿತ ವಾಹನಗಳಿವೆ. ಫೋರ್ಡ್ ಕಂಪನಿಯು 2030 ರ ವೇಳೆಗೆ ದೇಶದಲ್ಲಿ ಶೇಕಡಾ 40 ರಿಂದ 50 ರಷ್ಟು ವಿದ್ಯುತ್ ವಾಹನಗಳನ್ನು ಓಡಿಸಲು ಪಣ ತೊಟ್ಟಿದೆ.