ಹೈದರಾಬಾದ್ : ಈಗ ಏನಿದ್ರೂ ಎಲೆಕ್ಟ್ರಾನಿಕ್ ವಾಹನಗಳ ಜಮಾನ. ಬೈಕ್‌ಗಳಿಂದ ಹಿಡಿದು ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಾಹನಗಳು ಮಾರುಕಟ್ಟೆಗೆ ಬರಲು ಪೈಪೋಟಿ ನಡೆಸುತ್ತಿವೆ. ಆದರೆ, ಇದೀಗ ವಿದ್ಯುತ್ ಚಾಲಿತ ಐಷಾರಾಮಿ ಕಾರುಗಳು ಕೂಡ ಮಾರುಕಟ್ಟೆಗೆ ಬರುತ್ತಿವೆ. ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗುತ್ತಿದೆ.
ಬಿಎಂಡಬ್ಲ್ಯೂ ಸಂಸ್ಥೆಯ ಸ್ಪೋರ್ಟ್ಸ್ ಆಕ್ಟಿವಿಟಿ ಕಾರು ಐಎಕ್ಸ್ ಎಸ್‌ಯುವಿ ಬುಕ್ಕಿಂಗ್‌ನ ಮೊದಲ ದಿನವೇ ಸಂಪೂರ್ಣ ಮಾರಾಟವಾಗುವ ಮೂಲಕ ಗಮನ ಸಳೆದಿದೆ. ನಿನ್ನೆ ಆರಂಭವಾದ ಮೊದಲ ಹಂತದ ಬುಕ್ಕಿಂಗ್‌ಗೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ ಎಂದು ಬಿಎಂಡಬ್ಲ್ಯೂ ಹೇಳಿದೆ.
ಈ ಎಲೆಕ್ಟ್ರಾನಿಕ್ ಕಾರುಗಳನ್ನು ಆನ್‌ಲೈನ್ ಹಾಗೂ ಡೀಲರ್‌ಶಿಪ್‌ಗಳ ಮೂಲಕ ಬುಕ್ ಮಾಡಲು ಅವಕಾಶ ನೀಡಲಾಗಿದೆ. 2022ರ ಏಪ್ರಿಲ್‌ನಿಂದ ಕಾರುಗಳ ವಿತರಣೆ ಪ್ರಾರಂಭವಾಗುತ್ತವೆ ಎಂದು ಕಂಪನಿ ಬಹಿರಂಗಪಡಿಸಿದೆ.
2022ರ ಮೊದಲ ತ್ರೈಮಾಸಿಕದಲ್ಲಿ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ಬಿಎಂಡಬ್ಲ್ಯೂ ಪ್ರಕಟಿಸಿದೆ. ಮುಂದಿನ 6 ತಿಂಗಳಲ್ಲಿ ಬಿಎಂಡಬ್ಲ್ಯೂ ದೇಶದಲ್ಲಿ ಬಿಡುಗಡೆ ಮಾಡಲಿರುವ ಮೂರು ಎಲೆಕ್ಟ್ರಿಕ್ ವಾಹನಗಳಲ್ಲಿ ಐಎಕ್ಸ್ ಮೊದಲನೆಯದು.
ಈ ಎಸ್‌ಯುವಿ ಕಾರಿನ ಬೆಲೆ 1.16 ಕೋಟಿ ರೂ.ಗಳಿಂದ ಆರಂಭವಾಗುತ್ತದೆ. ಕಾರನ್ನು ಸಂಪೂರ್ಣ ಸುಸಜ್ಜಿತ ವಾಹನವಾಗಿ (CBU) ಆಮದು ಮಾಡಿಕೊಳ್ಳಲಾಗಿದೆ.
ಬಿಎಂಡಬ್ಲ್ಯೂ ಎಲೆಕ್ಟ್ರಾನಿಕ್ ಕಾರು ವಿಶೇಷತೆಗಳು..
ಇದು ಆಲ್ ವೀಲ್ ಡ್ರೈವ್ ವೆಹಿಕಲ್ (SAV-ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಆಗಿದ್ದು, ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಚಲಿಸುವ ಈ ಕಾರು ಕೇವಲ 6.1 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆಯುತ್ತದೆ.
ಆರಂಭಿಕ ಕೊಡುಗೆಯ ಅಡಿಯಲ್ಲಿ ಸ್ಮಾರ್ಟ್ ಬಿಎಂಡಬ್ಲ್ಯೂ ವಾಲ್‌ಬಾಕ್ಸ್ ಚಾರ್ಜರ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. 11ಕಿ.ವ್ಯಾ ಎಸಿ ಚಾರ್ಜರ್‌ನೊಂದಿಗೆ ಮನೆಯ ಸಮೀಪ 7 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. 2.5 ಗಂಟೆಗಳ ಚಾರ್ಜಿಂಗ್‌ನೊಂದಿಗೆ 100 ಕಿ.ಮೀ.ವರೆಗೆ ಪ್ರಯಾಣಿಸಬಹುದು.
150 ಕಿ.ವ್ಯಾ ಡಿಸಿ ಚಾರ್ಜರ್ 31 ನಿಮಿಷಗಳಲ್ಲಿ ಶೇ.80ರಷ್ಟುವರೆಗೆ ಚಾರ್ಜ್ ಆಗುತ್ತದೆ. 50 ಕಿ.ವ್ಯಾ ಡಿಸಿ ಚಾರ್ಜರ್‌ನೊಂದಿಗೆ ಶೇ.80ರಷ್ಟರವರೆಗೆ ಚಾರ್ಜ್ ಮಾಡಲು 73 ನಿಮಿಷ ತೆಗೆದುಕೊಳ್ಳುತ್ತೆ. ದೇಶಾದ್ಯಂತ 35 ನಗರಗಳಲ್ಲಿ ತನ್ನ ಡೀಲರ್ ನೆಟ್‌ವರ್ಕ್‌ನಲ್ಲಿ ವೇಗದ ಚಾರ್ಜರ್‌ಗಳನ್ನು ಸ್ಥಾಪಿಸುವುದಾಗಿ ಕಂಪನಿ ಹೇಳಿದೆ.
ವಾರಂಟಿ ಹೀಗಿದೆ..
ಕಿಲೋಮೀಟರ್‌ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕಾರಿಗೆ ಎರಡು ವರ್ಷಗಳ ವಾರಂಟಿಯನ್ನು ನೀಡಲಾಗುತ್ತದೆ. ಎಂಟು ವರ್ಷಗಳು ಅಥವಾ 1.6 ಲಕ್ಷ ಕಿ.ಮೀ. ವರೆಗೆ ಬ್ಯಾಟರಿಗಳು ವಾರಂಟಿಯನ್ನು ಹೊಂದಿವೆ.
ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಫೋಕ್ಸ್‌ವ್ಯಾಗನ್ ಯುವಿ ಬಿಡುಗಡೆ ; ಹೊಸ ಕಾರಿನ ಬೆಲೆ ಇಷ್ಟು..