ನವದೆಹಲಿ : ಚೀನಾದೊಂದಿಗಿನ ಗಡಿ ಉದ್ವಿಗ್ನತೆ ಗಮನದಲ್ಲಿಟ್ಟುಕೊಂಡು ಬಂದರುಗಳಲ್ಲಿ ಜಾಗರೂಕತೆ ಹೆಚ್ಚುತ್ತಿರುವ ಮಧ್ಯೆ, ಕಸ್ಟಮ್ಸ್ ಸಾಗಣೆ ತೆರವುಗೊಳಿಸಲು ವಿಳಂಬ ಮಾಡುವುದರಿಂದ ಮೇಕ್ ಇನ್ ಇಂಡಿಯಾ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಯುಎಸ್ಐಬಿಸಿ ಹೇಳಿದೆ.
ಯಾವುದೇ ಔಪಚಾರಿಕ ಆದೇಶವಿಲ್ಲದಿದ್ರೂ ವಿಮಾನ ನಿಲ್ದಾಣ ಅಥವಾ ಬಂದರಿಗೆ ಆಗಮಿಸುವ ಚೀನಾ ಮೂಲದ ಸರಕುಗಳನ್ನು ಭಾರತೀಯ ಕಸ್ಟಮ್ಸ್ ಪ್ರಾಧಿಕಾರ ಪರಿಶೀಲಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹಠಾತ್ ಹಾಗೂ ಅಘೋಷಿತ ಕಸ್ಟಮ್ಸ್ ಚೆಕ್ ಬಗ್ಗೆ ದೂರು ನೀಡಲಾಗಿದೆ. ಭಾರತದ ಹಲವು ಬಂದರುಗಳಲ್ಲಿ ಆಮದಿನ ಪ್ರವೇಶ ಗಣನೀಯವಾಗಿ ನಿಧಾನಗೊಳಿಸಿದೆ ಎಂದು ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಹೇಳಿದೆ.
ಸರಕುಗಳ ತೆರವು ವಿಳಂಬವು ಮೇಕ್ ಇನ್ ಇಂಡಿಯಾ ಉಪಕ್ರಮದ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಂಕ್ರಾಮಿಕ ವೇಳೆ ಗ್ರಾಹಕರು ಮತ್ತು ವ್ಯವಹಾರಗಳು, ಔಷಧೀಯ ವಸ್ತುಗಳು, ವೈದ್ಯಕೀಯ ಸಾಧನಗಳು, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಸಾಧನಗಳಿಗೆ ಅಡ್ಡಿಯಾಗಲಿದೆ.
ರಾಷ್ಟ್ರೀಯ ಗಡಿ ಭದ್ರತೆ ರಕ್ಷಣೆಯ ಅಗತ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಜಾಗತಿಕ ಉತ್ಪಾದನೆಗೆ ಸ್ವಾವಲಂಬಿ ಕೇಂದ್ರವಾಗುವುದು ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಸಂಯೋಜನೆಗೊಳ್ಳುವ ಭಾರತದ ಗುರಿಯು ಪಾರದರ್ಶಕತೆಯನ್ನು ಅವಲಂಬಿಸಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.