ನವದೆಹಲಿ: ಕೆಲವು ಆಸ್ಪತ್ರೆಗಳು ನಿಗದಿಗಿಂತ ಹೆಚ್ಚಿನ ದರ ವಿಧಿಸುತ್ತಿವೆ. ಕೋವಿಡ್ -19 ಸೋಂಕಿತರಿಗೆ ಚಿಕಿತ್ಸೆ ನೀಡಲು ಪಾಲಿಸಿದಾರರಿಂದ ಹಣಕ್ಕಾಗಿ ಒತ್ತಾಯಿಸುತ್ತಿವೆ ಎಂಬ ವರದಿಗಳ ಮಧ್ಯೆ, ವಿಮಾ ನಿಯಂತ್ರಕ ಐಆರ್‌ಡಿಎಐ ಇಂತಹ ಅಕ್ರಮಗಳನ್ನು ಸಂಬಂಧಪಟ್ಟ ರಾಜ್ಯ ಅಧಿಕಾರಿಗಳ ಗಮನಕ್ಕೆ ತರುವಂತೆ ವಿಮೆದಾರರಿಗೆ ಮನವಿ ಮಾಡಿದೆ.
ಪಾಲಿಸಿದಾರರ ಕುಂದು ಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲ ನೆಟ್‌ವರ್ಕ್ ಪೂರೈಕೆದಾರರೊಂದಿಗೆ ಪರಿಣಾಮಕಾರಿ ಸಂವಹನ ಚಾನೆಲ್ ಹಾಕುವಂತೆ ಐಆರ್‌ಡಿಎಐ ವಿಮಾದಾರರನ್ನು ಕೇಳಿದೆ.
ಎಲ್ಲ ನೆಟ್‌ವರ್ಕ್ ಪೂರೈಕೆದಾರರು ಪಾಲಿಸಿದಾರರಿಗೆ ನಗದು ರಹಿತ ಸೇವೆಗಳನ್ನು ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ನಗದುರಹಿತ ಸೇವೆ ಪಡೆಯುವಾಗ ಪಾಲಿಸಿದಾರರಿಗೆ ಅನಾನುಕೂಲತೆಯ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು, ವಿಮಾದಾರರಿಗೆ ಎಲ್ಲ ನೆಟ್‌ವರ್ಕ್ ಪೂರೈಕೆದಾರರೊಂದಿಗೆ ಕುಂದು ಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಪರಿಣಾಮಕಾರಿ ಸಂವಹನ ಚಾನಲ್ ಸ್ಥಾಪಿಸುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸುತ್ತೋಲೆಯಲ್ಲಿ ತಿಳಿಸಿದೆ.
ವಿಮಾದಾರರಿಗೆ ಹೆಚ್ಚಿನ ಕಟ್ಟುಪಾಡು ವಿಧಿಸುವ ಅಥವಾ ನಗದು ರಹಿತ ಸೌಲಭ್ಯ ನಿರಾಕರಣೆ ಕಂಡು ಬಂದರೆ ಸೂಕ್ತ ಕ್ರಮಕ್ಕಾಗಿ ಆಯಾ ರಾಜ್ಯ ಸರ್ಕಾರಗಳಿಗೆ ವರದಿ ಮಾಡಲು ಸೂಚಿಸಲಾಗಿದೆ.
ಪಾಲಿಸಿದಾರರಿಂದ ಮುಂಗಡ ಠೇವಣಿ ಕೋರುವುದು ಆಸ್ಪತ್ರೆ ಮತ್ತು ವಿಮಾ ಕಂಪನಿಗಳ ನಡುವಿನ ಸೇವಾ ಮಟ್ಟದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಐಆರ್‌ಡಿಎಐ ಹೇಳಿದೆ.
ಪಾಲಿಸಿದಾರರಿಗೆ ಬೇರೆ - ಬೇರೆ ದರಗಳನ್ನು ವಿಧಿಸುವುದು, ಮುಂಗಡ ಠೇವಣಿ ಬೇಡಿಕೆ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಪಾಲಿಸಿದಾರರಿಗೆ ನಗದುರಹಿತ ಚಿಕಿತ್ಸೆ ನಿರಾಕರಿಸುವುದು ಪಾಲಿಸಿದಾರರ ಹಿತಾಸಕ್ತಿಗೆ ಹಾನಿಕಾರಕ. ಸೇವಾ ಪೂರೈಕೆದಾರ ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳ ನಡುವಿನ ಸೇವಾ ಮಟ್ಟದ ಒಪ್ಪಂದ ಉಲ್ಲಂಘಿಸಬಹುದು ಎಂದು ನಿಯಂತ್ರಕ ಹೇಳಿದೆ.